ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದಲ್ಲಿ ರಸ್ತೆ ಅಪಘಾತ ಸಂಖ್ಯೆ ಮತ್ತು ಇದರಲ್ಲಿ ಗಾಯಗೊಂಡು ಮೃತಪಟ್ಟವರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
2019ರಲ್ಲಿ ಜಿಲ್ಲೆಯಲ್ಲಿ 328 ಮಾರಣಾಂತಿಕ ಅಪಘಾತಗಳು ಸಂಭವಿಸಿ 365 ಮಂದಿ ಮೃತಪಟ್ಟಿದ್ದರು. ಈ ವರ್ಷ ಇದುವರೆಗೆ 208 ಅಪಘಾತಗಳು ಸಂಭವಿಸಿದ್ದು, 222 ಜನ ಸಾವನ್ನಪ್ಪಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ವರ್ಷ ಅಪಘಾತ ಮತ್ತು ಮರಣ ಪ್ರಮಾಣ ಶೇ.10ರಷ್ಟು ಕಡಿಮೆ ಆಗುವಂತೆ ನೋಡಿಕೊಳ್ಳುವುದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಜವಾಬ್ದಾರಿಯಾಗಿದೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಅಪಘಾತ ಸಂಭವಿಸಿದ ಸ್ಥಳಗಳ ಪರಿಶೀಲನೆ ನಡೆಸಿ, ಮುಂದೆ ಅಪಘಾತಗಳು ನಡೆಯದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಸ್ಮಾರ್ಟ್ ಸಿಟಿ ಫಂಡ್: ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ಸ್ಮಾರ್ಟ್ ಸಿಟಿ ಅನುದಾನ ಬಳಸಿಕೊಳ್ಳಲಾಗುವುದು. ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಉಬ್ಬುಗಳ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಇನ್ನಿತರ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
87 ಮಾಹಿತಿ ಫಲಕ ಅಳವಡಿಕೆ: ಅಪಘಾತಗಳು ಸಂಭವಿಸಿದಾಗ ಮಾಹಿತಿಗಾಗಿ ಹತ್ತಿರದ ಆಸ್ಪತ್ತೆ, ಪೊಲೀಸ್ ಠಾಣೆ, ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಒಳಗೊಂಡ 87 ಮಾಹಿತಿ ಫಲಕಗಳನ್ನು ಅಳವಡಿಸುವ ಕ್ರಿಯಾ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಎಸ್.ಪಿ. ಎಚ್.ಟಿ.ಶೇಖರ್, ಎಸ್.ಪಿ. ಕೆ.ಎಂ.ಶಾಂತರಾಜು , ಆರ್‌ಟಿಒ ಲಕ್ಷ್ಮಿಕಾಂತ್ ನಾಲವಾರ್ ಇತರರು ಉಪಸ್ಥಿತರಿದ್ದರು.