ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭ್ರೂಣ ಹತ್ಯೆ ತಡೆಗೆ ಜಿಲ್ಲಾ ಆರೋಗ್ಯ ಇಲಾಖೆ ಸಮರ ಸಾರಿದೆ. ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಗಳ ಪರಿಶೀಲನೆ ಮಾಡುವುದಾಗಿ ಡಿ.ಎಚ್.ಒ ಡಾ.ರಾಜೇಶ್ ಸುರಗೀಹಳ್ಳಿ ತಿಳಿಸಿದ್ದಾರೆ.
ಪಿಸಿಪಿಎಂಡಿಟಿ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು. ಸಮಿತಿ ಸದಸ್ಯ ಡಾ.ನಾಗರಾಜ್ ನಾಯಕ್, ಸಮಿತಿ ಸದಸ್ಯೆ ಡಾ.ವೀಣಾ ಭಟ್, ಡಾ.ಅರುಣ್, ಡಾ.ಮಂಜುನಾಥ್ ನಗ್ಲೀಕರ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲೆಯಲ್ಲಿವೆ 99 ಸೆಂಟರ್: 9 ನೋಂದಾಯಿತ ಸರಕಾರಿ ಮತ್ತು 90 ಖಾಸಗಿ ಸೇರಿ ಒಟ್ಟು 99 ಸ್ಕ್ಯಾನಿಂಗ್ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಸರಕಾರಿ ಸಂಸ್ಥೆಗಳಲ್ಲಿ 24 ಮತ್ತು ಖಾಸಗಿಯಲ್ಲಿ 141 ಸ್ಕ್ಯಾನಿಂಗ್ ಯಂತ್ರಗಳಿವೆ. ನಗರವೊಂದರಲ್ಲೇ 52 ಖಾಸಗಿ ಸ್ಕ್ಯಾನಿಂಗ್ ಸಂಸ್ಥೆಗಳಿದ್ದು 96 ಯಂತ್ರಗಳಿವೆ.
ಯಾವುದಕ್ಕೆ ಏನು ಶಿಕ್ಷೆ
- ನೋಂದಾಯಿತ ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದ್ದಲ್ಲಿ ಮೊದಲ ಅಪರಾಧಕ್ಕೆ 3 ವರ್ಷಗಳ ಜೈಲು, 10 ಸಾವಿರ ದಂಡ. ಎರಡನೇಯದ್ದಕ್ಕೆ 5 ವರ್ಷದವರೆಗೆ ಜೈಲು ಮತ್ತು 50 ಸಾವಿರ ರೂ.ವರೆಗೆ ದಂಡ.ನ್ಯಾಯಾಲಯದಲ್ಲಿ ಅಪರಾಧ ನಿರ್ಣಯ ಆಗುವವರೆಗೆ ನೋಂದಣಿ ತಡೆಹಿಡಿಯಲಾಗುತ್ತದೆ.
- ಅಪರಾಧ ದೃಢಪಟ್ಟರೆ ಪ್ರಥಮ ಅಪರಾಧಕ್ಕೆ ರಾಜ್ಯ ವೈದ್ಯಕೀಯ ಮಂಡಳಿಯಿಂದ ವೈದ್ಯಕೀಯ ವೃತ್ತಿ ಮಾಡದಂತೆ ಅವರ ಹೆಸರನ್ನು 5 ವರ್ಷ ತೆಗೆಯಲಾಗುತ್ತದೆ. ಒಂದುವೇಳೆ, ಇದೇ ಮುಂದುವರಿದ್ದಲ್ಲಿ ಶಾಶ್ವತವಾಗಿ ಅವರ ಹೆಸರು ಕೈಬಿಡಲಾಗುತ್ತದೆ.
- ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಭ್ರೂಣ ಹತ್ಯೆಗೆ ಆಕೆಯ ಪತಿ, ಸಂಬಂಧಿಕರು ಒತ್ತಾಯಿಸಿದ್ದಲ್ಲಿ ಶಿಕ್ಷಾರ್ಹ ಅಪರಾಧ. ಅವರಿಗೆ ಮೊದಲ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು, 50 ಸಾವಿರ ರೂ. ದಂಡ, ನಂತರದ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಮತ್ತು 1 ಲಕ್ಷ ರೂ. ದಂಡ.