ಡಿ.ಆರ್.ಡಿ.ಒದಲ್ಲಿ ನೌಕರಿ ಕೊಡುವುದಾಗಿ ನಂಬಿಸಿ ಪಂಗನಾಮ!

 

 

ಸುದ್ದಿ ಕಣಜ.ಕಾಂ
ಬೆoಗಳೂರು: ಡಿ.ಆರ್.ಡಿ.ಒದಲ್ಲಿ ಸಹಾಯಕ ಆಡಳಿತಗಾರನೌಕರಿ ಕೊಡಿಸುವ ಆಸೆ ತೋರಿಸಿ ಉದ್ಯೋಗ ಆಕಾಂಕ್ಷಿಗಳಿoದ ಲಕ್ಷಾಂತರ ರೂ. ಪೀಕಿಸಿರುವ ಘಟನೆ ನಡೆದಿದೆ.
ಬಿ.ಇ.ಎನ್. ಲೇಔಟ್ ನಿವಾಸಿ ಗಣೇಶ್ ಗೌಡ ಎಂಬಾತ ದೂರು ನೀಡಿದ್ದು, ಡಾ. ಮುರಳಿ ಗೌಡ ಎಂಬಾತನ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಖಾಸಗಿ ಕಾಲೇಜುವೊಂದರ ಸಮೀಪ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ ಗಣೇಶ್ ಲಕ್ಷಾಂತರ ಹಣ ಕಳೆದುಕೊಂಡಿದ್ದಾನೆ.

ಖೆಡ್ಡಕ್ಕೆ ಬಿದ್ದಿದ್ದು ಹೇಗೆ: ಕೆಲ ತಿಂಗಳ ಹಿಂದೆ ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಹುದ್ದೆಗೆ ಗಣೇಶ್ ಗೌಡ ಅರ್ಜಿ ಸಲ್ಲಿಸುತ್ತಿದ್ದರು. ಆಗ ಈತನ ಜೆರಾಕ್ಸ್ ಅಂಗಡಿಗೆ ಬಂದಿದ್ದ ಮುರುಳಿ ಗೌಡ ಈತನ ಅಪ್ಲಿಕೇಶನ್ ನೋಡಿ, ತಾನು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಜತೆಗೆ, ಪ್ರಧಾನ ಮಂತ್ರಿ ಅವರ ಕಚೇರಿಯ ಕಾರ್ಯಾಚರಣೆ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಸಹಾಯಕ ಆಡಳಿತಗಾರ ಹುದ್ದೆ ಖಾಲಿ ಇದ್ದು, ಕೊಡಿಸುವ ಆಸೆ ಹುಟ್ಟಿಸಿದ್ದಾರೆ. ಆದರೆ, ಅದಕ್ಕೆ ಆರು ಲಕ್ಷ ರೂ. ವ್ಯಯ ಮಾಡಬೇಕಾಗುತ್ತದೆಂದು ತಿಳಿಸಿದ್ದಾರೆ. ಒಂದುವೇಳೆ, ಒಪ್ಪಿಗೆ ಸೂಚಿಸಿದ್ದಲ್ಲಿ ಸಂಬoಧಪಟ್ಟವರೊoದಿಗೆ ಮಾತನಾಡಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಒಂದು ವಾರದ ಬಳಿಕ ಫಾಲೋ ಅಪ್:
ಗಣೇಶನಿಂದ ಅಡ್ವಾನ್ಸ್ ಆಗಿ 3 ಲಕ್ಷ ರೂ. ಪಡೆದಿದ್ದ. ಬಾಕಿ ಹಣ ನೇಮಕಾತಿ ಬಳಿಕ ನೀಡುವಂತೆ ಸೂಚಿಸಿದ್ದ. ಅದೇ ರೀತಿ ಗಣೇಶನ ಪತ್ನಿಯಿಂದ 3 ಲಕ್ಷ ರೂ. ಹಾಗೂ ಆತನ ಸಂಬoಧಿಕರಿoದಲೂ ಲಕ್ಷಾಂತರ ರೂ. ಪಡೆದಿರುವುದಾಗಿ ದೂರಲಾಗಿದೆ..

ಕೋವಿಡ್ ಕಾರಣ ಹೇಳಿ ಜಾರಿಕೊಂಡಿದ್ದ:
ಉದ್ಯೋಗ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಡೆದಿದ್ದ ಮುರುಳಿಗೌಡಗೆ ನೇಮಕಾತಿ ಪತ್ರ ನೀಡುವಂತೆ ಕೇಳಿದಾಗ ಕೋವಿಡ್ ನಿಂದಾಗಿ ವಿಳಂಬವಾಗುತ್ತಿದೆ ಎಂಬ ಸಬೂಬು ನೀಡಿದ್ದ ಎನ್ನಲಾಗಿದೆ.
ಅನುಮಾನಗೊಂಡು ಆತ ನೆಲೆಸಿದ್ದ ಅಂದ್ರಹಳ್ಳಿಯ ಮನೆಗೆ ಹೋಗಿ ವಿಚಾರಿಸಿದಾಗ ಆತ ಅಲ್ಲಿಂದ ಪರಾರಿಯಾಗಿದ್ದ. ಆರೋಪಿ ಮುರಳಿಗೌಡ 9 ಜನರಿಂದ 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!