ಸಂಸದ ರಾಘವೇಂದ್ರ ವಿರುದ್ಧ ತೀನಶ್ರೀ ಆರೋಪಕ್ಕೆ ಜಿಲ್ಲಾ ಬಿಜೆಪಿ ಆಕ್ರೋಶ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಆರೋಪಗಳನ್ನು ಮಾಡಿರುವ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀನಶ್ರೀನಿವಾಸ್ ಅವರ ಹೇಳಿಕೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಕೋಚಿಂಗ್ ಡಿಪೋ ಕುರಿತು ಸಂಸದರನ್ನು ಟೀಕಿಸಿದ್ದಲ್ಲದೇ ಅವರ ಬಗ್ಗೆ ಲಘುವಾಗಿ ಮಾತನಾಡಲಾಗಿದೆ. ಬಹುಶಃ ರೈಲ್ವೆ ಕ್ಷೇತ್ರದಲ್ಲಿ ಶಿವಮೊಗ್ಗಕ್ಕೆ ರಾಘವೇಂದ್ರ ಅವರು ನೀಡಿರುವ ಕೊಡುಗೆಯನ್ನು ಅವರು ಮರೆತಂತಿದೆ. ವಾಸ್ತವದಲ್ಲಿ ಈ ಬಗ್ಗೆ ಟೀಕಿಸುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿಡಿಮಿಡಿಗೊಂಡರು.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತಾಳಗುಪ್ಪದಿಂದ ಶಿವಮೊಗ್ಗ ಮಧ್ಯೆ ಇರುವ ಬ್ರಾಡ್ ಗೇಜ್ ಕಾಮಗಾರಿ ಮಾಡುವುದನ್ನು ಬಿಟ್ಟು ಹಳಿಯನ್ನು ತೆಗೆಯುವ ಪ್ರಯತ್ನ ನಡೆದಿತ್ತು. ಆದರೆ, ಸಂಸದರ ಅಭಿವೃದ್ಧಿಪರ ದೃಷ್ಟಿಕೋನ, ಇಚ್ಚಾಶಕ್ತಿಯಿಂದಾಗಿ ಬ್ರಾಡ್ ಗೇಜ್ ಪೂರ್ಣಗೊಂಡಿದೆ. ಟೀಕಿಸುವ ಮುನ್ನ ಈ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.
ತಾಂತ್ರಿಕ ಕಾರಣದಿಂದಾಗಿ ಕೋಟೆಗಂಗೂರಲ್ಲಿ ಡಿಪೋ: ಶಿವಮೊಗ್ಗ- ರಾಣೆಬೆನ್ನೂರು ರೈಲು ಸೇವೆ ಶುರುವಾದ ಬಳಿಕ ತಾಳಗುಪ್ಪಕ್ಕೆ ಹೋಗಲು ತೊಂದರೆ ಆಗಲಿದೆ. ಇದನ್ನು ಮನಗಂಡು ರೈಳ್ವೆ ಇಲಾಖೆ ಅಧಿಕಾರಿಗಳು ನೀಡಿದ ವರದಿ ಆಧಾರದ ಮೇಲೆ ರೈಲ್ವೆ ಕೋಚಿಂಗ್ ಡಿಪೋ ಅನ್ನು ಕೋಟೆಗಂಗೂರಿಗೆ ಸ್ಥಳಾಂತರಿಸಲಾಗಿದೆ. ಈ ವಸ್ತುಸ್ಥಿತಿ ಅರಿತುಕೊಳ್ಳದೇ ಆರೋಪಿಸುವುದು ಸರಿಯಲ್ಲ ಎಂದು ಮೇಘರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಶಿವರಾಜ್, ರಾಮು, ಬಿ.ಕೆ.ಶ್ರೀನಾಥ್, ಎನ್.ಜೆ.ಸತೀಶ್, ಸುನಿತಾ ಅಣ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!