ಪರೀಕ್ಷೆ ಬರೆಯಲು ಬರುತ್ತಿದ್ದ ಯುವತಿ, ಚಲಿಸುತ್ತಿದ್ದ ರೈಲಿನಿಂದ ತುಂಗಾ ನದಿಗೆ ಬಿದ್ದಿದ್ದು ಹೇಗೆ, ಮುಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೀಪಾವಳಿ ಹಬ್ಬ ಆಚರಣೆ ಹಾಗೂ ನವೆಂಬರ್ 22ರಂದು ನಡೆಯಲಿದ್ದ ಎಂಸಿಎ ಪರೀಕ್ಷೆ ಬರೆಯುವುದಕ್ಕಾಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಯುವತಿ ಜನ್ ಶತಾಬ್ದಿ ರೈಲಿನಿಂದ ತುಂಗಾ ನದಿಗೆ ಬಿದ್ದಿದ್ದು, ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದೆ.
ಮೂಲತಃ ಶಿವಮೊಗ್ಗದ ಗಾಡಿಕೊಪ್ಪದ ಸಹನಾ ಬಿ. ಬಸವರಾಜ್ (24) ಎಂಬಾಕೆ ತುಂಗಾ ನದಿಗೆ ಬಿದ್ದಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಹನಾ ತನ್ನ ತಾಯಿಯೊಂದಿಗೆ ಬರುತ್ತಿದ್ದರು. ಮುಂದಿನ ರೈಲ್ವೆ ನಿಲ್ದಾಣದಲ್ಲಿ ಇಳಿಬೇಕಾಗಿದ್ದರಿಂದ ವಾಶ್ ರೂಮ್’ಗೆ ಹೋಗಿ ಬರುವಾಗ ತುಂಗಾ ಹೊಳೆಯ ಮೇಲೆ ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ಯುವತಿ ನದಿಗೆ ಬಿದ್ದಿದ್ದಾಳೆ. ತಕ್ಷಣ ಅಲ್ಲಿದ್ದವರು ಗಮನಿಸಿದ್ದಾರೆ.
ಕರಸ್ಪಾಂಡೆನ್ಸ್’ನಲ್ಲಿ ಎಂಸಿಎ ಓದುತ್ತಿದ್ದ ಸಹನಾ ತನ್ನ ತಾಯಿಯೊಂದಿಗೆ ಬೆಂಗಳೂರಿನ ಸಂಪಿಗೆಯಲ್ಲಿ ವಾಸಿಸುತ್ತಿದ್ದರು. ಮೂಲತಃ ಶಿವಮೊಗ್ಗದವರೇ ಆಗಿದ್ದು, ಹಬ್ಬ ಆಚರಿಸುವುದಕ್ಕಾಗಿ ಬರುತ್ತಿದ್ದರು.
2 ತಂಡಗಳಿಂದ ಶೋಧ ಕಾರ್ಯ: ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್. ಅಶೋಕ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ 10-12 ಸಿಬ್ಬಂದಿಯ ಎರಡು ತಂಡ ಕಾರ್ಯಾಚರಣೆ ನಡೆಸಿದೆ. ಘಟನೆ ನಡೆದ ಕೆಲವ ಹೊತ್ತಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ತುಂಗಾ ನದಿಯಲ್ಲಿ ಫ್ಲಡ್ ಲೈಟ್ ಸಹಾಯದಿಂದ ಬೋಟ್ ಮೂಲಕ 1.30 ಯಿಂದ 2 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. ಮತ್ತೆ ಶುಕ್ರವಾರ ಬೆಳಗ್ಗೆಯೇ ಹುಡುಕಾಟ ಮಾಡಲಾಗುತ್ತಿದೆ.
ತುಂಗೆಯಲ್ಲಿ ಹೆಚ್ಚು ರಭಸದಿಂದ ನೀರು ಹರಿಯುತ್ತಿಲ್ಲವಾದರೂ ಅಗ್ನಿಶಾಮಕ ದಳದ ಸಿಬ್ಬಂದಿ ಬಿದ್ದ ಸ್ಥಳದಿಂದ 100-120 ಮೀಟರ್ ವರೆಗೆ ಶೋಧ ಕಾರ್ಯ ಈಗಾಗಲೇ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!