ಬರೇಕಲ್ ಬತೇರಿಯಲ್ಲಿ ನಿಧಿಗಾಗಿ ನಡೀತು ವಾಮಾಚಾರ, ಮುಖ್ಯದ್ವಾರ ಧ್ವಂಸ

 

ಸುದ್ದಿ ಕಣಜ.ಕಾಂ
ಹೊಸನಗರ: ಮಲೆನಾಡು ಹಲವು ಐತಿಹಾಸಿಕ ರೋಚಕ ಸತ್ಯಗಳನ್ನು ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದೆ. ಅದರಲ್ಲಿ ಹೊಸನಗರ ತಾಲೂಕಿನ ಬರೇಕಲ್ ಬತ್ತೇರಿ ಕೂಡ ಒಂದು. ಆದರೆ, ಈ ಇತಿಹಾಸ ಪ್ರಸಿದ್ಧ ಸ್ಮಾರಕದಲ್ಲಿ ಇತ್ತೀಚೆಗೆ ನಿಧಿಯಾಸೆಗೆ ಬತ್ತೇರಿಯ ಪ್ರವೇಶ ದ್ವಾರವನ್ನೇ ಧ್ವಂಸಗೊಳಿಸಿರುವುದು ಬೆಳಕಿಗೆ ಬಂದಿದೆ.

https://www.highperformancegate.com/cdeyj4mni3?key=f95ce548ba397001c5150fe03b415e4a

ತ್ರಿವೇಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬರೇಕಲ್ ಬತ್ತೇರಿ (ಹಿಲ್ಕುಂಜಿ ಬತ್ತೇರಿ)ಯ ಪ್ರವೇಶ ದ್ವಾರವನ್ನು ಕೆಡವಿ, ಅಲ್ಲಿ ವಾಮಾಚಾರ ಮಾಡಿರುವ ಕೆಲವು ಕುರುಹುಗಳೂ ಸಿಕ್ಕಿವೆ. ದ್ವಾರವನ್ನು ಪೂಜೆ ಮಾಡಲಾಗಿದ್ದು, ಅಲ್ಲಿ ದೇವರ ಚಿಕ್ಕದೊಂದು ವಿಗ್ರಹವನ್ನೂ ಇಡಲಾಗಿದೆ.
1640ರ ಸುಮಾರಿಗೆ ಶಿವಪ್ಪ ನಾಯಕರ ಅವಧಿಯಲ್ಲಿ ನಿರ್ಮಾಣ ಮಾಡಿದೆ ಎನ್ನಲಾದ ಈ ಸ್ಮಾರಕಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಇಲ್ಲಿಗೆ ಬರಬೇಕಾದರೆ ಕಾಡು ಮೇಡಿನ ದಾರಿ ದಾಟಲೇಬೇಕು. ಅಷ್ಟೊಂದು ಸರಳವಾಗಿ ಯಾರ ಕಣ್ಣಿಗೂ ಈ ಪ್ರದೇಶ ಬೀಳುವುದಿಲ್ಲ. ಇಂತಹ ಪ್ರದೇಶದಲ್ಲಿ ನಿಧಿಗಾಗಿ ಸ್ಮಾರಕವನ್ನೇ ಧ್ವಂಸ ಮಾಡಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ: ಇತಿಹಾಸ ತಜ್ಞ ಅಜಯ್ ಕುಮಾರ್ ಶರ್ಮಾ ಅವರು ತಮ್ಮ ತಂಡದೊಂದಿಗೆ ವೀಕ್ಷಿಸುವುದಕ್ಕಾಗಿ ಭೇಟಿ ನೀಡಿದಾಗ ನಡೆದ ಅನಾಹುತ ಗಮನಕ್ಕೆ ಬಂದಿದೆ. ಬೆಳಗ್ಗೆ ಆಗಾಗ ಜನರು ಇಲ್ಲಿಗೆ ಭೇಟಿ ನೀಡುವದರಿಂದ ಇಂತಹ ಕೃತ್ಯ ಎಸಗಲಾಗದು. ಹುಣ್ಣಿಮೆ ಬೆಳಕಿನ ಲಾಭ ಪಡೆದು ರಾತ್ರಿ ಹೊತ್ತಲ್ಲಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಜತೆಗೆ ರಾತ್ರಿ ಹೊತ್ತಲ್ಲಿ ಫೈಯರ್ ಕ್ಯಾಂಪ್ ಮಾಡಿರುವ ಕುರುಹುಗಳೂ ಅಲ್ಲಿ ಪ್ರಾಪ್ತವಾಗಿವೆ.
ಇದೇ ಮೊದಲಲ್ಲ: ಈ ಹಿಂದೆ ಬಿದನೂರು ಅರಸ ಸಮಾಧಿ ಇರುವ ಜಾಗದಲ್ಲಿಯೂ ನಿಧಿಯಾಸೆಗಾಗಿ ಇಂತಹ ಕೃತ್ಯ ನಡೆದಿತ್ತು. ಜತೆಗೆ, ಶೂಲದ ಗುಡ್ಡ, ಗಳಿಗೆಬಟ್ಟಲು, ಬಸವನಬ್ಯಾಣದಲ್ಲೂ ಕೃತ್ಯಗಳು ನಡೆದಿವೆ. ಆದರೆ, ಇತಿಹಾಸ ಪ್ರಸಿದ್ಧ ತಾಣಗಳನ್ನು ರಕ್ಷಿಸುವ ಕೆಲಸ ಆಗಿಲ್ಲ ಎನ್ನುವುದು ಇತಿಹಾಸ ತಜ್ಞರ ಬೇಸರ.
ಪುರಾತತ್ವ ಇಲಾಖೆಗೂ ಸೇರಿಲ್ಲ: ಬರೇಕಲ್ ಬತ್ತೇರಿ (ಹಿಲ್ಕುಂಜಿ ಬತ್ತೇರಿ) ಶತಮಾನಗಳ ಇತಿಹಾಸ ಹೊಂದಿರುವ ಸ್ಮಾರಕ. ಆದರೆ, ಇದುವರೆಗೆ ಈ ಪ್ರದೇಶವನ್ನು ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರಿಲ್ಲ. ಕನಿಷ್ಠ ಸ್ಥಳೀಯರ ವಿಶ್ವಾಸ ಪಡೆದಾದರೂ ಸಂರಕ್ಷಣಾ ಕಾರ್ಯ ನಡೆಯಬೇಕೆನ್ನುವುದು ಇತಿಹಾಸ ಪ್ರೇಮಿಗಳ ಆಗ್ರಹವಾಗಿದೆ.

Leave a Reply

Your email address will not be published.