ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಂದಿನ ಎರಡು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ರಸ್ತೆ, ಸೇತುವೆ, ವಿಮಾನ ನಿಲ್ದಾಣ, ನೀರಾವರಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಸಂಸದ ಬಿ.ವೈ.ರಾಫವೇಂದ್ರ ಹೇಳಿದರು.
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಸಮಾರಂಭದ ಸಭಾ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 22 ಇದ್ದ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ 44ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳ ಪಟ್ಟಿ
- ನಿಟ್ಟೂರು ಮತ್ತು ಹೊಸನಗರ ಭಾಗದಲ್ಲಿ ಶಿಥಿಲಗೊಂಡಿರುವ 7 ಸೇತುವೆಗಳ ಪುನರ್ ನಿರ್ಮಾಣಕ್ಕಾಗಿ 19 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ
- 423 ಕೋಟಿ ರೂ. ವೆಚ್ಚದಲ್ಲಿ ಕಳಸವಳ್ಳಿ-ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಇನ್ನೊಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.
- 516 ಕೋಟಿ ರೂ. ವೆಚ್ಚದಲ್ಲಿ ಚಿತ್ರದುರ್ಗ-ಶಿವಮೊಗ್ಗ ಚತುಷ್ಪಥ ರಸ್ತೆ ಅಭಿವೃದ್ಧಿಯಿಂದ ಬೆಂಗಳೂರು ಸಂಪರ್ಕ ಸುಲಭವಾಗಲಿದೆ.
- ಶಿವಮೊಗ್ಗ ನಗರದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದ ವಿದ್ಯಾನಗರದ ಬಳಿ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯ 44 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
- 96 ಕೋಟಿ ರೂ. ವೆಚ್ಚದಲ್ಲಿ ಸೊಲ್ಲಾಪುರ-ಮಂಗಳೂರು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
- ತೀರ್ಥಹಳ್ಳಿ-ಉಡುಪಿ ರಸ್ತೆಯಲ್ಲಿ 8.20 ಕೋಟಿ ರೂ. ವೆಚ್ಚದಲ್ಲಿ 3 ಕಿರು ಸೇತುವೆ ನಿರ್ಮಾಣ
- ಬೈಂದೂರು-ರಾಣೆಬೆನ್ನೂರು ರಸ್ತೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 7 ಕಿರು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
- ಸಿಆರ್ಎಫ್ ಯೋಜನೆಯಡಿ ಇನ್ನೂ 400 ಕೋಟಿ ರೂ. ಯೋಜನೆಗಳ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ
- ಶಿವಮೊಗ್ಗ ನಗರದಲ್ಲಿ 3200 ಮೀಟರ್ ಉದ್ದದ ರನ್ ವೇ ಸೌಲಭ್ಯ ಹೊಂದಿರುವ ವಿಮಾನ ನಿಲ್ದಾಣ ಕಾಮಗಾರಿ ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ.
- ತುಂಗಾ ನದಿಯಿಂದ ಜಿಲ್ಲೆಯ 1500 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಅಯನೂರು ಮಂಜುನಾಥ, ಎಸ್.ರುದ್ರೇಗೌಡ, ಶಾಸಕ ಆರಗ ಜ್ಞಾನೇಂದ್ರ, ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ರಾಜ್ಯದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 3660 ಕೋಟಿ ರೂ. ಅನುದಾನ ಒದಗಿಸಿದೆ. 5612 ಕಿಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪಿಎಂಜಿಎಸ್ವೈ ಯೋಜನೆಯಡಿ ಅನುದಾನ ನೀಡಲಾಗಿದೆ.
ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಸಚಿವ