ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ವರದ ಯಾವುದೇ ಪ್ರಕರಣ ವರದಿಯಾಗಿಲ್ಲ. ಹಕ್ಕಿಜ್ವರದ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಎಲ್ಲ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಕ್ಕಿ ಜ್ವರ ಕುರಿತಾಗಿ ಕೈಗೊಳ್ಳಬೇಕಾಗಿರುವ ಮುನ್ನಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2 ಟೀಸರ್ ಗೆ ಅಭಿಮಾನಿಗಳು ಫಿದಾ
ತಾಲೂಕುಗಳಲ್ಲಿ ತಂಡ ರಚನೆ: ನೆರೆಯ ರಾಜ್ಯದಲ್ಲಿ ಹಕ್ಕಿ ಜ್ವರದ ಪ್ರಕರಣ ಕಂಡು ಬಂದಿವೆ. ಆದರೆ, ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಹಕ್ಕಿ ಜ್ವರ ಲಕ್ಷಣದ ಬಗ್ಗೆ ನಿಗಾ ವಹಿಸಲು ಎಲ್ಲ ತಾಲೂಕುಗಳಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ.
ಹಕ್ಕಿಜ್ವರದ ಬಗ್ಗೆ ಸಂದೇಹಾಸ್ಪದ ಪ್ರಕರಣಗಳು ಪತ್ತೆಯಾದರೆ ಸಾರ್ವಜನಿಕರು ಕರೆ ಮಾಡಿ ಮಾಹಿತಿಯನ್ನು ನೀಡಬಹುದಾಗಿದೆ. ಹಕ್ಕಿಗಳು ಸತ್ತಿರುವ ಬಗ್ಗೆ ವರದಿಯಾದರೆ ಈ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಗತ್ಯವಿದ್ದರೆ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸಂಪರ್ಕ ಸಂಖ್ಯೆ
ಹಕ್ಕಿಜ್ವರದ ಬಗ್ಗೆ ಯಾವುದೇ ಸಂಶಯಗಳು ಕಂಡು ಬಂದರೆ ಜಿಲ್ಲಾಮಟ್ಟದ ದೂರವಾಣಿ ಸಂಖ್ಯೆ 08182-255921, 226603 ಕರೆ ಮಾಡಿ ಮಾಹಿತಿ ನೀಡಬಹುದು. ತಕ್ಷಣ ಸ್ಪಂದನೆ ನೀಡಲಾಗುವುದು.
– ಡಾ.ಸದಾಶಿವ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಶಿವಮೊಗ್ಗ
ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ: ಅರಣ್ಯ ಇಲಾಖೆ ಸಿಬ್ಬಂದಿ ಹಕ್ಕಿಜ್ವರದ ಬಗ್ಗೆ ನಿಗಾ ವಹಿಸಬೇಕು. ಕೋಳಿ ಫಾರ್ಮ್ ಗಳಲ್ಲೂ ನಿಗಾ ವಹಿಸಬೇಕು. ಫಾರ್ಮ್ ಮಾಲಿಕರೊಂದಿಗೆ ಸಭೆ ನಡೆಸಿ ಮಾಹಿತಿ ನೀಡಬೇಕು. ಪಕ್ಷಿಗಳ ಹಿಕ್ಕೆ ಮತ್ತು ಕೆರೆಕುಂಟೆಗಳ ನೀರಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಒದಗಿಸಬೇಕು. ವಲಸೆ ಹಕ್ಕಿಗಳ ಮೇಲೆ ನಿಗಾ ಇರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಹಕ್ಕಿಗಳ ಸಾವು, ಕಾರಣವೇನು ಗೊತ್ತಾ?
ಮಾಂಸ ಬೇಯಿಸಿ ತಿನ್ನಿ: ಹಕ್ಕಿಜ್ವರದ ಬಗ್ಗೆ ಗಾಬರಿ ಪಡುವ ಅಗತ್ಯವಿಲ್ಲ. ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಪೌಲ್ಟ್ರಿಯಲ್ಲಿ ಅಥವಾ ಹಕ್ಕಿಯೊಂದಿಗೆ ನೇರ ಸಂಪರ್ಕ ಇರುವವರು ಹಕ್ಕಿಜ್ವರದಿಂದ ಬಾಧಿತರಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ ಅಗತ್ಯ ಬರಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದರು.