ಸುದ್ದಿ ಕಣಜ.ಕಾಂ
ಬೆಂಗಳೂರು: 1997ರಲ್ಲಿ ಹಾಂಕಾಂಗ್ ಪತ್ತೆಯಾದ ಮೊದಲ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ಕಾಡುತ್ತಿದೆ.
ವೈಜ್ಞಾನಿಕವಾಗಿ ಇನ್ಫ್ಲೂಯೆಂಜಾ(ಬರ್ಡ್ ಫ್ಲೂ) ಎಂದೇ ಕರೆಯಲಾಗುವ ಈ ಹಕ್ಕಿ ಜ್ವರ ಪಿಡುಗಿಗೆ ಎಚ್5ಎನ್1 ಎಂಬ ವೈರಸ್. ಏಷಿಯಾ, ಯೂರೋಪ್, ಆಫ್ರಿಕಾ ಭಾಗಗಳಲ್ಲಿ 2005-06ರಿಂದ 400ಕ್ಕೂ ಅಧಿಕ ಪ್ರಾಣಕ್ಕೆ ಎರವಾಗಿದೆ. 2008ರ ಮಾರ್ಚ್ ವರೆಗೆ 48 ರಾಷ್ಟ್ರಗಳಲ್ಲಿ 372 ಜನರಿಗೆ ಈ ಸೋಂಕು ತಗಲಿದೆ. ಈ ಪೈಕಿ 235 ಜನ ಸಾವನ್ನಪ್ಪಿದ್ದಾರೆ.
ಮುಂಜಾಗ್ರತೆಗಳೇನು?
- 70 ಡಿಗ್ರಿ ಸೆಂಟಿಗ್ರೇಡ್ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರ ಕೋಳಿ ಮೊಟ್ಟೆ ಸೇವಿಸಬೇಕು
- ಯಾವುದೇ ಹಕ್ಕಿಗೆ ಜ್ವರ ಕಂಡುಬಂದಲ್ಲಿ ಕೂಡಲೇ ಸುತ್ತಲಿನ ಹಕ್ಕಿ(ಕೋಳಿ)ಗಳ ಹತ್ಯೆ ಅನಿವಾರ್ಯ
- ಹಕ್ಕಿ ಜ್ವರ ಬಂದ ಸ್ಥಳಕ್ಕೆ ಭೇಟಿ ನೀಡುವವರು ಕಾಯಿಲೆ ತಗುಲದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ಸಲಹೆಯ ಮೇರೆಗೆ ಮಾತ್ರೆ ಪಡೆಯಬಹುದು
- ಕೋಳಿ ಸಾಕಾಣಿಕೆ ಮಾಡುವವರಲ್ಲಿ ಹಕ್ಕಿ ಜ್ವರದ ಬಗ್ಗೆ ಮಾಹಿತಿ ಇರಲೇಬೇಕು. ಈಗಾಗಲೇ ಪಶುಪಾಲನಾ ಇಲಾಖೆಯಿಂದ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ
- ಹಕ್ಕು ಸಾಕುವ ಜಾಗ ಸ್ವಚ್ಛವಾಗಿ ಇಡಲೇಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು
- ಹಕ್ಕಿ ಜ್ವರದಿಂದ ಸತ್ತ ಕೋಳಿಯನ್ನು ಐದಾರು ಪದರ ಸುಣ್ಣ ಹಾಗೂ ಮಣ್ಣು ಹಾಕಿ ಮುಚ್ಚಬೇಕು ಇಲ್ಲವೇ ಸುಡಬೇಕು
- ಹಕ್ಕಿ ಜ್ವರದ ಸೀಸನ್ನಲ್ಲಿ ಅತಿಯಾದ ಶೀತ, ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು
ಹಕ್ಕಿ ಜ್ವರದ ಲಕ್ಷಣಗಳೇನು?
- ಸೋಂಕಿತ ವ್ಯಕ್ತಿಯಲ್ಲಿ ಎರಡ್ಮೂರು ದಿನದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ
- ಅತಿಯಾದ ಜ್ವರ, ಶೀತ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಉಂಟಾಗುತ್ತದೆ
- ಎಕ್ಸ್ ಮಾಡಿಸಿದ್ದಲ್ಲಿ ಸೋಂಕಿನಿಂದ ಎದೆಯಲ್ಲಾದ ಕೆಲವು ಬದಲಾವಣೆಗಳು ಗೊತ್ತಾಗುತ್ತವೆ
ಸೋಂಕಿತ ಹಕ್ಕಿಯ ಎಲ್ಲವೂ ವೈರಸ್ ಮಯ: ಸೋಂಕು ತಗಲಿದ ಹಕ್ಕಿಯ ಮಲ, ಮೂತ್ರ, ಸಿಂಬಳ, ಉಸಿರು ಸಹ ರೋಗಾಣುಗಳಿಂದ ಕೂಡಿರುತ್ತದೆ. ಹೀಗಾಗಿ, ಹಕ್ಕಿ ವಾಸವಾಗಿರುವ ಗಾಳಿ, ಸಾಕಾಣಿಕೆಗೆ ಬಳಸುವ ಉಪಕರಣ ಆದಿಯಾಗಿ ಎಲ್ಲವೂ ಸೋಂಕಿತವಾಗಿರುತ್ತದೆ. ಅಪರೂಪವಾಗಿ ಇದು ಮನುಷ್ಯನಿಗೂ ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ, ಕೋಳಿ ಫಾರಂ, ಸಾಕಿರುವ ಮನೆ ಇತ್ಯಾದಿ ಸ್ಥಳಗಳಲ್ಲಿ ವಾಸವಾಗಿರುವವರು ಹೆಚ್ಚು ಜಾಗರೂಕತೆ ವಹಿಸಬೇಕಾಗಿರುತ್ತದೆ. ಆದರೆ, ಇದು ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ತಗಲುವುದಿಲ್ಲ ಎಂಬುವುದು ಸಮಾಧಾನಕರ ಸಂಗತಿಯಾಗಿದೆ.