ಸುದ್ದಿ ಕಣಜ.ಕಾಂ
ಬೆಂಗಳೂರು: ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್ ನ ಕೆಲವು ದೃಶ್ಯಗಳು ವೀಕ್ಷಕರಿಗೆ ಹತ್ತಿರವಾಗಿದ್ದವು. ಅದರಲ್ಲೂ ಆಧುನಿಕ ಶೈಲಿಯ ಗನ್ ಹಿಡಿದು ವೈರಿಗಳನ್ನು ಸೆದೆಬಡಿದು ಸ್ಟೈಲ್ ಆಗಿ ಸಿಗರೇಟ್ ಹಚ್ಚುತ್ತಿದ್ದ ದೃಶ್ಯವಂತೂ ಭಾರಿ ಹತ್ತಿರವಾಗಿದೆ. ಆದರೆ, ಇದೇ ದೃಶ್ಯಕ್ಕೆ ಚಿತ್ರದಿಂದ ಕತ್ತರಿ ಹಾಕುವಂತೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
ಸಿಗರೇಟ್ ಸೇವನೆಯ ದೃಶ್ಯ ಕಡಿತಗೊಳಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ನೋಟಿಸ್ ನಲ್ಲಿ ಆರೋಗ್ಯ ಇಲಾಖೆ ಮನವಿ ಮಾಡಿದೆ.
ನೋಟಿಸ್ ನೀಡಲು ಕಾರಣ: ಸಿಗರೇಟ್ ಸೇದುವ ದೃಶ್ಯವಿದ್ದು, ಇದರಿಂದ ತಂಬಾಕು ಉತ್ಪನ್ನಗಳ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ. ಸಾಮಾಜಿಕ ಸ್ವಾಸ್ಥ್ಯ ಮತ್ತು ಕಳಕಳಿ ಹೊಂದಿರುವ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಯುವ ಅಭಿಮಾನಿಗಳನ್ನು ಹೊಂದಿರುವ ಯಶ್ ಅವರನ್ನೇ ಅನುಕರಿಸುವವರಿದ್ದಾರೆ. ಸಿಗರೇಟು ಸೇವನೆಯಿಂದ ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಶೀಘ್ರವೇ ಇಂತಹ ದೃಶ್ಯಗಳು ಸೋಶಿಯಲ್ ಮೀಡಿಯಾದಿಂದ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಯಶ್ ಅವರಿಗೆ ಮನವಿ ಮಾಡಿದ್ದಾರೆ.
ಪರ ವಿರೋಧವೂ ವ್ಯಕ್ತ: ಸಿಗರೇಟ್ ಸೇವನೆಯ ದೃಶ್ಯಕ್ಕೆ ಕತ್ತರಿ ಹಾಕುವಂತೆ ನೋಟಿಸ್ ನೀಡಿರುವ ಆರೋಗ್ಯ ಇಲಾಖೆಯ ಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಹಲವರು ಸಮರ್ಥಿಸಿಕೊಂಡಿದ್ದಾರೆ. ಸಿಗರೇಟ್ ಮಾರಾಟವನ್ನೇ ನಿಷೇಧಿಸಲಿ, ಅದನ್ನು ಬಿಟ್ಟು ದೃಶ್ಯಕ್ಕೆ ನೋಟಿಸ್ ನೀಡುವುದು ಎಷ್ಟು ಸರಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಈ ದೃಶ್ಯದಿಂದ ಯುವಪೀಳಿಗೆಗೆ ಸಿಗರೇಟ್ ಸೇದುವ ಪ್ರಚೋಚನೆ ನೀಡಿದಂತಾಗುತ್ತದೆ ಎಂದೂ ಹೇಳಲಾಗಿದೆ.