ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ದುರ್ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಭೇಟಿ ನೀಡಿದ್ದಾರೆ.
ಅಲ್ಲಿಯ ಪರಿಸ್ಥಿತಿಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುವಾರ ರಾತ್ರಿ ಹುಣಸೋಡು ಕಲ್ಲು ಕ್ರಷರ್ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಇದುವರೆಗೆ ಆರು ಜನ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ತನಿಖೆಯ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ. ನಿಷ್ಪಕ್ಷವಾದ ತನಿಖೆಯಿಂದ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು.
– ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಹೈದರಾಬಾದ್ ತಂಡದಿಂದ ತನಿಖೆ | ಹೈದರಾಬಾದ್ ನಿಂದ ಆಗಮಿಸಿದ ಡೈರೆಕ್ಟರ್ ಆಫ್ ಎಕ್ಸ್ಪೆÇ್ಲೀಸಿವ್ ತಂಡ ಈಗಾಗಲೇ ಪ್ರಾಥಮಿಕ ತನಿಖೆಯನ್ನು ಕೈಗೊಂಡಿದೆ. ತನಿಖೆ ಮುಂದುವರಿಸಿದೆ. ಜತೆಗೆ, ಸ್ಥಳೀಯವಾಗಿ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ಘಟನೆಯ ತನಿಖೆಯನ್ನು ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
5 ಲಕ್ಷ ರೂಪಾಯಿ ಪರಿಹಾರ | ದುರ್ಘಟನೆಯಲ್ಲಿ ಸಾವಿಗೀಡಾದ ಮೃತರ ಕುಟುಂಬಗಳಿಗೆ ಈಗಾಗಲೇ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಆಯಾಮದಲ್ಲೂ ತನಿಖೆ | ಘಟನೆಯಲ್ಲಿ ಸ್ಫೋಟಕದ ಬಳಕೆ, ಅದು ಎಲ್ಲಿಂದ ಬಂತು ಹೀಗೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಕ್ರಷರ್ಗಳಿಗೆ ಪರವಾನಿಗೆ ಇದೆ | ಈ ಪ್ರದೇಶದಲ್ಲಿರುವ ಎಲ್ಲ ಕ್ರಚರ್ಗಳು ಪರವಾನಗಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ. ಆದರೆ, ಇಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಇರುವುದಿಲ್ಲ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಈ ಕುರಿತು ಸರ್ಕಾರ ಮರು ಪರಿಶೀಲನೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.