SPECIAL REPORT | ಸುದ್ದಿ ಕಣಜ.ಕಾಂ
ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಬಹುತೇಕರಿಗೆ `ಥೂ… ಸ್ಥಳೀಯ ಭಾಷೆಯಲ್ಲಿ ಚಾಟ್ ಮಾಡುವ ಅವಕಾಶ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರ್ತಿತ್ತು’ ಎನಿಸಿರಲೇಬೇಕು. ಕೆಲವೊಮ್ಮೆ ಅನಿಸಿದ ಭಾವವನ್ನು ಪರಭಾಷೆಯಲ್ಲಿ ವ್ಯಕ್ತಪಡಿಸಲಾಗದೇ ಅದು ಅಲ್ಲಿಯೇ ಬತ್ತಿದ ಅನುಭವ ಎಲ್ಲರಿಗೂ ಆಗಿರಲೇಬೇಕು. ಹೌದಲ್ಲವೇ?
ಇದೆಲ್ಲದಕ್ಕೂ ಉತ್ತರ ಒಂದೆ `ಕೂ’! ಕನ್ನಡಿಗರು ಕನ್ನಡದಲ್ಲಿಯೇ ವ್ಯವಹರಿಸಿ ತಮ್ಮ ಭಾವನೆಗಳಿಗೆ ಜೀವ ತುಂಬಲು ಕಲ್ಪಿಸಿರುವ ವೇದಿಕೆ. ಇದನ್ನು ಈಗಾಗಲೇ ಸಾಕಷ್ಟು ಕನ್ನಡಿಗರು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ಲೇ ಸ್ಟೋರ್ ನಲ್ಲಿ ಮಾತ್ರವಲ್ಲದೇ ಕನ್ನಡಿಗರ ಹೃದಯ ಮಂದಿರದಲ್ಲೂ ಕೂ ಜಾಗ ಮಾಡಿಕೊಂಡಿದೆ. ಹಲವರು ಇದರ ಬಳಕೆಗೆ ಮುಂದಾಗುತ್ತಿದ್ದಾರೆ.
ಅದರಲ್ಲೂ ಚೀನಿ ತಂತ್ರಾಂಶಗಳು ಬಂದ್ ಮಾಡುವ ಮೂಲಕ ವಿದೇಶಿ ವಸ್ತು, ವ್ಯಾಪಾರ, ಸರಕುಗಳಿಗೆ ನಿಷೇಧ ಹೇರಿದ ನಂತರವಂತೂ ಭಾರತ ಮೂಲಕ `ಕೂ’ ಮತ್ತಷ್ಟು ಸದ್ದು ಮಾಡುತ್ತಿದೆ.
ಟ್ವಿಟರ್ ಸಮನಾದ ಫೀಚರ್ | ಕೂ ನಲ್ಲಿ ಟ್ವಿಟರ್ ಗೆ ಸಮವಾದ ಫೀಚರ್ ಗಳಿವೆ. ಸುಧಾರಿತ ಆಯ್ಕೆಗಳನ್ನು ಸಹ ನೀಡಲಾಗಿದೆ. ಪ್ರಸ್ತುತ 1 ಮಿಲಿಯನ್ ಗೂ ಅಧಿಕ ಜನ ಈ ಆಪ್ ಬಳಸುತ್ತಿದ್ದಾರೆ. ಇದರಲ್ಲಿ ಕನ್ನಡ ಅಸ್ಮಿತೆ, ತನ್ನ ಭಾಷೆ ಎನ್ನುವ ಅಭಿಮಾನ ಹಲವರನ್ನು ಆಕರ್ಷಿಸುತ್ತಿದೆ. ಹೀಗಾಗಿ, ಕೂ ಬಳಗ ದಿನೇ ದಿನೆ ಏರಿಕೆಯಾಗುತ್ತಿದೆ.
ಇತ್ತೀಚೆಗೆ, ಕೆಲವು ಸೋಶಿಯಲ್ ಮೀಡಿಯಾಗಳ ಪ್ರೈವೇಸಿ ಪಾಲಿಸಿ ವ್ಯಕ್ತವಾದ ಅನುಮಾನದ ಹಿನ್ನೆಲೆ ಬಳಕೆದಾರರು ಸ್ವದೇಶಿ ತಂತ್ರಾಂಶದೆಡೆ ಮಾರುಹೋಗುತ್ತಿದ್ದಾರೆ. ಕೇಂದ್ರ ಸರ್ಕಾರದ `ಓಕಲ್ ಫಾರ್ ಲೋಕಲ್’ ಕೂಡ ಇದಕ್ಕೆ ಪೂರಕವಾಗಿದೆ.
ಯಾರು ಸಂಸ್ಥಾಪಕರು | ನಮ್ಮ ಬೆಂಗಳೂರಿನವರೇ ಆದ ಅಪ್ರಮೇಯ ರಾಧಾಕೃಷ್ಣ ಅವರು ಕೂ ಆಪ್ ಅಭಿವೃದ್ಧಿ ಪಡಿಸಿದ್ದಾರೆ. ಅಪ್ರೇಮಯ ಅವರೇ ತಂತ್ರಾಂಶದ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಇದರ ಸರ್ವರ್ ನಿರ್ವಹಣೆ ಮುಂಬೈನಲ್ಲಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ | ಕನ್ನಡ, ಹಿಂದಿ, ತೆಲಗು, ತಮಿಳು, ಬಂಗಾಳಿ, ಗುಜರಾತಿ ಮತ್ತು ಮರಾಠಿ ಭಾಷೆಯಲ್ಲಿ ಕೂ ಲಭ್ಯವಿದೆ. ಶೀಘ್ರದಲ್ಲೇ ಇಂಗ್ಲಿಷ್ ಭಾಷೆಯಲ್ಲೂ ಲಭ್ಯವಾಗಲಿದೆ.
ಕೂ ವೈಶಿಷ್ಟ್ಯಗಳೇನು?
- ಟ್ವಿಟರ್ನಲ್ಲಿ ಕೇವಲ 2 ನಿಮಿಷದ ವಿಡಿಯೋ ಅಪ್ ಲೋಡ್ ಮಾಡುವ ಅವಕಾಶವಿದೆ. ಆದರೆ, ಕೂನಲ್ಲಿ 10 ನಿಮಿಷದವರೆಗೆ ಅಪ್ ಲೋಡ್ ಮಾಡಬಹುದು.
- ಕೂನಲ್ಲಿ ಟ್ವಿಟರ್ ನಂತೆಯೇ ಪೋಸ್ಟ್, ವಿಡಿಯೋ ಫೋಟೊ ಪೋಸ್ಟ್ ಮಾಡಬಹುದು.
- ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಅನಿಲ ಕುಂಬ್ಳೆ, ಸೆಲೆಬ್ರೆಟಿಗಳು ತಂತ್ರಾಂಶ ಬಳಸುತ್ತಿದ್ದಾರೆ.
- ಇಂಗ್ಲಿಷ್ ಗಿಂತ ಪ್ರಾದೇಶಿಕ ಭಾಷೆಗಳಿಗೆ ಅಧಿಕ ಒತ್ತು
- ಕಥೆ, ಕವನ, ಹೊಸ ಚಿಂತನೆಗಳನ್ನು ಅಭಿವ್ಯಕ್ತಪಡಿಸಲು ಪೂರಕ ವೇದಿಕೆ
ಪ್ರಾದೇಶಿಕ ಭಾಷೆಗೆ ಒತ್ತು ಕಾರಣವೇನು?: ಇಡೀ ತಂತ್ರಜ್ಞಾನ ಹಾಗೂ ಜಗತ್ತು ಇಂಗ್ಲಿಷ್ ಹಿಂದೆ ಓಡುತ್ತಿದೆ. ಅದೊಂದು ಬಿಸಿಲು ಕುದುರೆಯಂತೆ ಎಲ್ಲರಿಗೂ ಕಾಡುತ್ತಿದೆ. ಜಾಗತಿಕ ಮಟ್ಟದ ಅವಕಾಶಗಳು ಇರುವುದರಿಂದ ಸಹಜವಾಗಿಯೇ ಅದರೆಡೆಗೆ ಒತ್ತು ನೀಡಲಾಗುತ್ತಿದೆ. ಆದರೆ, ಅದಕ್ಕೆ ಭಿನ್ನವಾದ ಸಾಲಿನಲ್ಲಿ ನಿಲ್ಲುತ್ತದೆ ಈ `ಕೂ’. ಭಾರತದಲ್ಲಿ ಶೇ. 10ರಷ್ಟು ಜನರಿಗೆ ಮಾತ್ರ ಇಂಗ್ಲಿಷ್ ಮಾತನಾಡಬಲ್ಲರು.ಅಂದಾಜು 1 ಬಿಲಿಯನ್ ಜನರಿಗೆ ಇಂಗ್ಲಿಷ್ ಗಂಧ ಗಾಳಿಯೇ ಇಲ್ಲ. ಅವರಲ್ಲಿ ಸ್ಮಾರ್ಟ್ ಫೋನ್ ಇದೆ. ಇಂಟರ್ನೆಟ್ ಇದೆ. ಆದರೆ, ಅರ್ಥವಾಗಬಲ್ಲ ಭಾಷೆಯ ತಂತ್ರಾಂಶ ಇಲ್ಲ. ಇದನ್ನು ಮನಗಂಡು ಕೂ ಜನ್ಮ ತಳೆದಿದೆ.