ಆರ್.ಎ.ಎಫ್. ತುಕ್ಕಡಿಗೆ ಅಮಿತ್ ಶಾ ಶಂಕುಸ್ಥಾಪನೆ, ಭದ್ರಾವತಿಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಡಿಎಆರ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಿಪ್ರ ಕಾರ್ಯ ಪಡೆ (ಆರ್.ಎ.ಎಫ್)ಗೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದರು.
ದಕ್ಷಿಣ ಭಾರತದ ನಾಲ್ಕು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಈ ಪಡೆ ಅನ್ವಯವಾಗಲಿದೆ. ಇದು ರಾಜ್ಯದ ಮೊದಲ ಘಟಕವಾಗಿದ್ದು, ಇದಕ್ಕೆ ಅಮಿತ್ ಶಾ ಅವರು ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಿದರು.
ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ಆರ್.ಎ.ಎಫ್ ಬಟಾಲಿಯನ್ ಭದ್ರಾವತಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು. ರಾಜ್ಯ ಸರ್ಕಾರ ಮಂಜೂರು ಮಾಡಿರುವ 50 ಎಕರೆ ಜಮೀನಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಘಟಕ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

amit shahಶಾಂತಿ ಸ್ಥಾಪನೆಯಲ್ಲಿ ಮುಖ್ಯ ಪಾತ್ರ: ದೇಶದಲ್ಲಿ ಆರ್.ಎ.ಎಫ್. ಶಾಂತಿಸ್ಥಾಪನೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿದೆ. ದೇಶದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಬಟಾಲಿಯನ್‍ಗಳು ಆರಂಭವಾದ ದಿನದಿಂದ ಇಲ್ಲಿಯವರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೂರ್ಣ ಸಫಲವಾಗಿವೆ. ಕಡಿಮೆ ಬಲ ಪ್ರಯೋಗದ ಮೂಲಕ ದಂಗೆ ಮತ್ತಿತರ ಘಟನೆಗಳನ್ನು ನಿಯಂತ್ರಿಸಲು ಸಕ್ಷಮವಾಗಿವೆ. ಒಟ್ಟು ಮೂರೂವರೆ ಲಕ್ಷ ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ । ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಶೀಘ್ರವೇ ಸಂಪುಟದಲ್ಲಿ ನಿರ್ಧಾರ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಪೊಲೀಸರನ್ನು ನೋಡುವ ದಷ್ಟಿಕೋನ ಬದಲಾವಣೆ ಆಗಬೇಕಿದೆ. ಅವರು ತಮ್ಮೆಲ್ಲ ಸಂತೋಷಗಳನ್ನು ಬಿಟ್ಟು ಜನರ ಸೇವೆ ಮಾಡುತ್ತಿದ್ದಾರೆ ಎಂದರು.

ಬರುವ ದಿನಗಳಲ್ಲಿ ಆತ್ಮನಿರ್ಭರ ಭಾರತದ ಕನಸು ಸಾಕಾರ ಆಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಅಶ್ವಥ್ ನಾರಾಯಣ, ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಉಪಸ್ಥಿತರಿದ್ದರು.

error: Content is protected !!