ವೇದಿಕೆಯ ಮೇಲೆ ಕಣ್ಣೀರಿಟ್ಟ ಬೇಳೂರು, ‘ದೀವರ ಅಭಿವೃದ್ಧಿಗೆ ಧರ್ಮಗುರು ಅಗತ್ಯ’

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಈಡಿಗ ಸಮಾಜದ ಕಣ್ಣುಗಳಿದ್ದಂತೆ. ಹಿರಿಯ ಮಾರ್ಗದರ್ಶನದಲ್ಲಿ ಸಮಾಜವನ್ನು ಇನ್ನಷ್ಟು ಉನ್ನತವಾಗಿ ಕಟ್ಟಬೇಕಿದೆ ಎಂದು ಮಾಜಿ ಶಾಸಕ ಗೋಪಾಳಕೃಷ್ಣ ಬೇಳೂರು ಹೇಳಿದರು.
ನಗರದ ಈಡಿಗ ಭವನದಲ್ಲಿ ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ, ರಾಮ ಮನೋಹರ ಲೋಹಿಯಾ ಟ್ರಸ್ಟ್ ಕಾಗೋಡು ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಬೂಮಣ್ಣಿ ಬುಟ್ಟಿ ಚಿತ್ತಾ ಸ್ಪರ್ಧೆ ಚಿತ್ತಾರಗಿತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬಂಗಾರಪ್ಪ ಅವರ ನಿಧನವನ್ನು ನೆನೆಸಿಕೊಂಡು ಬೇಳೂರು ಅವರು ಭಾವುಕರಾದರು. ಅವರನ್ನು ಸನ್ಮಾನಿಸುವ ಯೋಜನೆ ಇತ್ತು. ಆದರೆ, ಅದು ಫಲಿಸಲಿಲ್ಲ ಎಂದು ಕಣ್ಣೀರಿಟ್ಟರು.

ಈಡಿಗ ಸಮಾಜಕ್ಕೆ ಧರ್ಮಗುರು ಅಗತ್ಯ: ದೀವರು ಸಾಂಸ್ಕೃತಿಕವಾಗಿ ಒಂದಾಗಬೇಕಿದೆ. ಧರ್ಮಗುರು ಇದ್ದರೆ ಸಮಾಜ ಇನ್ನಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕಾಗೋಡು ಅವರ ನೇತೃತ್ವದಲ್ಲಿ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.

ದೀವರ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಸಮಾಜ ಬಾಂಧವರು ಒಗ್ಗೂಡಬೇಕು. ಮುಂದಿನ ಪೀಳಿಗೆಗೆ ಈ ಕಲಾ ಪ್ರಜ್ಞೆ ಧಾರೆ ಎರೆಯಬೇಕು. ಬೂಮಣ್ಣಿ ಬುಟ್ಟಿಯಲ್ಲಿರುವ ವಿನೂತನ ಪರಿಕಲ್ಪನೆಯೇ ಭಿನ್ನ ಆಲೋಚನೆಯಾಗಿದೆ. ಇದರಲ್ಲಿ ಕ್ರಿಯಾಶೀಲ ವಿಚಾರವಿದೆ.
– ಕಾಗೋಡು ತಿಮ್ಮಪ್ಪ, ಮಾಜಿ ಸಚಿವರು, ಅಧ್ಯಕ್ಷರು, ರಾಮಮನೋಹರ ಲೋಹಿಯಾ ಟ್ರಸ್ಟ್, ಕಾಗೋಡು

ಸಾಗರದಲ್ಲೂ ಕಾರ್ಯಕ್ರಮ ಆಯೋಜನೆ: ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ನಮ್ಮ ಸಮಾಜದಲ್ಲಿ ಬೌದ್ಧಿಕ ಸಂಪತ್ತಿಗೆ ಕೊರತೆ ಇಲ್ಲ. ಆದರೆ, ಅದನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ. ಆಧುನಿಕ ಕಾಲಘಟ್ಟದಲ್ಲಿ ಸಂಸ್ಕøತಿ ಮರೆಯಾಗುತ್ತಿದ್ದು, ಅದನ್ನು ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಬರುವ ದಿನಗಳಲ್ಲಿ ಸಾಗರ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಚಿಂತಿಸಲಾಗುವುದು ಎಂದು ತಿಳಿಸಿದರು.

ಧೀರ ದೀವರು ವೇದಿಕೆ ಸಂಚಾಲಕ ನಾಗರಾಜ್ ನೇರಿಗೆ ಪ್ರಾಸ್ತವಿಕ ಮಾತನಾಡಿದರು. ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸುರೇಶ್ ಕೆ.ಬಾಳೆಗುಂಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!