ಎಸ್‍ಎಸ್‍ಎಲ್‍ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ ತಯಾರಿಕೆ, ತರಗತಿ ಅವಧಿ ಬಗ್ಗೆ ಶಿಕ್ಷಣ ಸಚಿವರು ಹೇಳಿದ್ದೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ನಿಂದಾಗಿ ವಿಷಯದ ಆಳಕ್ಕಿಳಿದು ಬೋಧಿಸಲಾಗಿಲ್ಲ. ಹೀಗಾಗಿ, ಪ್ರಶ್ನೆ ತಯಾರಿಕೆ ವೇಳೆ ಶಿಕ್ಷಕರು ತಮ್ಮ ಪ್ರೌಢಿಮೆ ಪ್ರದರ್ಶಿಸಬಾರದು. ಸರಳ ಪ್ರಶ್ನೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ವಿದ್ಯಾರ್ಥಿಗಳ ಅಂಕ ಗಳಿಕೆಗೆ ಅನುಕೂಲವಾಗುತ್ತದೆ ಎಂದು ಮುಖ್ಯ ಶಿಕ್ಷಕರೊಬ್ಬರು ಅಹವಾಲು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, `ಶಿಕ್ಷಣ ಇಲಾಖೆ ಆಯುಕ್ತರು, ಪರೀಕ್ಷಾ ಮಂಡಳಿ ಜೊತೆ ಮಾತನಾಡುವ ಭರವಸೆ ನೀಡಿದರು.

ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಯಲ್ಲಿ ಯಾವ ಖಾಸಗಿಗೂ ಕಡಿಮೆ ಇಲ್ಲದಂತೆ ಸ್ಮಾರ್ಟ್ ಕ್ಲಾಸ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಕಲ್ಪನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಚರ್ಚಿಸಿ, ಚಿಂತಿಸಿ ಕ್ರಮ ವಹಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಇದೊಂದು ಉತ್ತಮ ಪ್ರಯತ್ನ ಮಾಡಲಾಗಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಎಂಡಿ, ಡಿಡಿಪಿಐ ಸೇರಿ ಸಂಬಂಧಪಟ್ಟವರ ಜತೆ ಮಾತನಾಡುವೆ.
– ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಪ್ರೌಢ ಶಾಲೆ ಶಿಕ್ಷಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಶಾಲಾಭಿವೃದ್ಧಿ ಸಮಿತಿಗಳೊಂದಿಗೆ ಬುಧವಾರ ಏರ್ಪಡಿಸಿದ್ದ ಸಚಿವರೊಂದಿಗೆ ಶಿಕ್ಷಣ ಸಂವಾದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಕೋವಿಡ್‍ನಿಂದಾಗಿ ನಿಗದಿಪಡಿಸಿರುವ ತರಗತಿ ಅವಧಿ ಯಾವುದಕ್ಕೂ ಸಾಲುತ್ತಿಲ್ಲ ಎಂಬ ಅಭಿಪ್ರಾಯ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಹಂತದ ಮುಖ್ಯ ಶಿಕ್ಷಕರು, ಪ್ರಾಂಶುಪಾಲರಿಂದ ವ್ಯಕ್ತವಾಯಿತು. ಇದಕ್ಕೆ ಉತ್ತರಿಸಿದ ಸಚಿವರು, ತಾಂತ್ರಿಕ ಸಲಹಾ ಸಮಿತಿ ಅವರ ಸೂಚನೆ ಅನ್ವಯ ತರಗತಿಗಳನ್ನು ಆರಂಭಿಸಲಾಗುವುದು. ಅವರ ಸೂಚನೆ ಅನ್ವಯ ಮತ್ತೊಂದು ಎಸ್.ಒ.ಪಿ ಹೊರಡಿಸಲಾಗುವುದು. ನಂತರ, ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಲು ಸಾಧ್ಯವೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸುದೀರ್ಘ ಚರ್ಚಿಸಲಾಗುವುದು ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ, ಕರ್ನಾಟಕ ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಪಾಲಿಕೆ ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಹನುಮಂತಪ್ಪ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಡಿಡಿಪಿಐ ಎನ್.ಎಂ.ರಮೇಶ್ ಉಪಸ್ಥಿತರಿದ್ದರು.

error: Content is protected !!