ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಶನಿವಾರ ಕ್ಷಿಪ್ರ ಕಾರ್ಯ ಪಡೆ (ಆರ್.ಎ.ಎಫ್)ಯ ಶಿಲಾನ್ಯಾಸ ಮತ್ತು ಭೂ ಪೂಜೆಯನ್ನು ಗೃಹ ಸಚಿವ ಅಮಿತ್ ಶಾ ನೆರವೇರಿಸಿದ್ದಾರೆ. ಇದರ ಬೆನ್ನಲ್ಲೇ ಅಡಿಗಲ್ಲು ಫಲಕದ ಬಗ್ಗೆ ವಿರೋಧ ವ್ಯಕ್ತವಾಗಿದೆ.
ಎಚ್.ಡಿ.ಕೆ. ಅವರು ಮಾಡಿರುವ ಟ್ವೀಟ್ ಏನು? | ಕ್ಲಿಕ್ ಮಾಡಿ
ಕಾರಣವೇನು: ಅಡಿಗಲ್ಲು ಫಲಕದಲ್ಲಿ ಪ್ರಾದೇಶಿಕ ಭಾಷೆಯೇ ಬಳಸಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಸಲಾಗಿದೆ. ಇಲ್ಲಿ ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕೆ ಅವರ ಆರೋಪಗಳೇನು?
- `ವೈವಿಧ್ಯಮಯ ಭಾರತ ತ್ರಿಭಾಷಾ ಸೂತ್ರಗಳನ್ನು ಅಳವಡಿಸಿಕೊಂಡಿದ್ದು, ಆಯಾ ರಾಜ್ಯದ ಭಾಷೆ ಗೌರವಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಗೃಹ ಸಚಿವರೇ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವುದು ಕನ್ನಡಕ್ಕೆ ಕನ್ನಡಿಗರಿಗೆ ಮಾಡಿದ ಅಗೌರವ. ಈ ಸಂದರ್ಭದಲ್ಲಿ ರಾಜ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನಾಡು, ನುಡಿಯ ಘನತೆಯನ್ನು ಮರೆತದ್ದು ಅತ್ಯಂತ ಖಂಡನೀಯ’ ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
- ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆರ್.ಎಎಫ್. ಘಟಕ ಸ್ಥಾಪನೆಗೆ ಕನ್ನಡದ ನೆಲವನ್ನೇ ಕೊಟ್ಟಿದ್ದು, ಈ ಪರಿಜ್ಞಾನವಿಲ್ಲದೆ ಕನ್ನಡದಲ್ಲಿ ಅಡಿಗಲ್ಲು ಫಲಕ ಇಲ್ಲದಿರುವುದು ಅಕ್ಷಮ್ಯ ಎಂದು ಆರೋಪಿಸಿದ್ದಾರೆ.
- ನಾಡು, ನುಡಿಯ ಘನತೆಗೆ ಚ್ಯುತಿ ಬಂದಾಗ ಸಹಿಸಿಕೊಳ್ಳುವವರಿಗೆ ಈ ರಾಜ್ಯದ ಆಡಳಿತ ನಡೆಸುವ ಅರ್ಹತೆ ಇಲ್ಲ. ಕೇಂದ್ರದ ಗೃಹ ಸಚಿವರು, ಸಿಎಂ, ಡಿಸಿಎಂ ಅವರ ನಡೆ ಕನ್ನಡಕ್ಕೆ ಬಗೆದ ದ್ರೋಹವಾಗಿದೆ.
- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತ್ರಿ ಭಾಷಾ ಉಲ್ಲಂಘಿಸಿದ್ದಕ್ಕೆ ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು