ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಉಡುಗಣಿ ಹೋಬಳಿಯ ತಡಸನಳ್ಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಗ್ರಾಮ ವಾಸ್ತವ್ಯ ಮಾಡಿದರು. ಈ ವೇಳೆ, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡಿದರು. ಮಕ್ಕಳಿಗೆ ಗಣಿತದ ಲೆಕ್ಕ ಹೇಳಿಕೊಟ್ಟರು.
VIDEO REPORT
ಬೆಳಗ್ಗೆ 11 ಗಂಟೆಗೆ ಸರಿಯಾಗಿ ಗ್ರಾಮ ಪ್ರವೇಶಿಸಿದ ಜಿಲ್ಲಾಧಿಕಾರಿ ಅವರನ್ನು ಗ್ರಾಮಸ್ಥರು, ಡೊಳ್ಳು, ಪಟಾಕಿಯೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮದ ಶಾಲೆಗೆ ಕರೆ ತಂದರು.
ಶಾಲೆಯ ಆವರಣದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದರು. ಸಾಮಾನ್ಯ ಆರೋಗ್ಯ ತಪಾಸಣೆ ಮಾತ್ರವಲ್ಲದೆ ಕಣ್ಣು, ಕಿವಿ, ಚರ್ಮ ಇತ್ಯಾದಿ ತಪಾಸಣೆಗೂ ಇಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ತಾಲೂಕಿನ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು.
ಆರೋಗ್ಯ ಕರ್ನಾಟಕ ಯೋಜನೆಯಡಿ ಸ್ಥಳದಲ್ಲಿಯೇ ಕಾರ್ಡ್ ಮುದ್ರಿಸಿ ನೀಡುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿತ್ತು. ಶಾಲೆ ಕೊಠಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು 6 ಮತ್ತು 7ನೇ ತರಗತಿಯ ಮಕ್ಕಳೊಂದಿಗೆ ಶಿಕ್ಷಕರಾಗಿ ಬೆರೆತರು. ಗಣಿತ, ಇಂಗ್ಲಿಷ್, ಕನ್ನಡ ವಿಷಯದ ಬಗ್ಗೆ ಮಕ್ಕಳ ಸಾಮರ್ಥ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ ಅವರು ಗಣಿತದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು.
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಶಿಕಾರಿಪುರ ತಹಶೀಲ್ದಾರ್ ಕವಿರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಭಯ ನೀಡಿದ ಡಿಸಿ | ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿಯಲು ಮತ್ತು ಬಗೆಹರಿಸಲು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ. ಎಲ್ಲ ಇಲಾಖೆಗಳು ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಿವಕುಮಾರ್ ಹೇಳಿದರು.
ಶಿಕಾರಿಪುರ ತಾಲೂಕಿನ ಎಲ್ಲ ಶಾಲೆಗಳಿಗೆ ಅತ್ಯುತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಶಿಕ್ಷಕರು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಆ ಮೂಲಕ ಎಸ್.ಎಸ್.ಎಸ್.ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಬಿ.ವೈ.ರಾಘವೇಂದ್ರ, ಸಂಸದರು