ಸುದ್ದಿ ಕಣಜ.ಕಾಂ
ಶಿವಮೊಗ್ಗ: ‘ರಾಬರ್ಟ್’ ಸಿನಿಮಾದಲ್ಲಿ ತಾವೇ ಹಿರೋಯಿನ್ ಆಗಿ ನಟಿಸಿರುವ ಆಶಾ ಭಟ್ ಹುಟ್ಟೂರಿನಲ್ಲಿ ಸಿನಿಮಾ ವೀಕ್ಷಿಸಿ ಖುಷಿಯನ್ನು ವ್ಯಕ್ತಪಡಿಸಿದರು. ಸಿನಿಮಾ ಶೂಟಿಂಗ್ ವೇಳೆ ಆದ ಅನುಭವಗಳನ್ನು ಹಂಚಿಕೊಂಡರು.
‘2017ರಲ್ಲಿ ಜಂಗ್ಲಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಅದಾದ ಬಳಿಕ `ರಾಬರ್ಟ್’ನಲ್ಲಿ ನಟಿಸಿದ್ದೇನೆ. ದರ್ಶನ್ ಸರ್ ಜತೆ ನಟಿಸಿರುವ ಅವಕಾಶ ಸಿಗುತ್ತದೆ ಎಂದು ಕೊಂಡಿರಲಿಲ್ಲ. ಸಿನಿಮಾ ನಟನೆ ಉತ್ತಮ ಎಕ್ಸ್ ಪೀರಿಯನ್ಸ್ ನೀಡಿದೆ. ದರ್ಶನ್ ಸರ್ ಹಾಗೂ ಇಡೀ ಟೀಂ ಹಸನ್ಮುಖಿಯಾಗಿದ್ದರಿಂದ ನಟನೆಯಲ್ಲೇನೂ ಕಷ್ಟವಾಗಲಿಲ್ಲ’ ಎಂದು ಆಶಾ ಭಟ್ ತಿಳಿಸಿದ್ದಾರೆ.
ರಾಬರ್ಟ್ ಸಿನಿಮಾವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ನಮ್ಮ ಕನ್ನಡತಿ ಎಂಬ ಹೆಮ್ಮೆ ಎಲ್ಲರಿಗೂ ಇದೆ. ಅದನ್ನು ಕೇಳಿ ಖುಷಿಯಾಗಿದೆ. ಅದರಲ್ಲೂ ಎಲ್ಲ ಥಿಯೇಟರ್ ಗಳೂ ಹೌಸ್ ಫುಲ್ ಆಗಿದ್ದು, ಟಿಕೆಟ್ ಸಿಗುತ್ತಿಲ್ಲ. ಜನರಿಂದ ಸಿಕ್ಕಿರುವ ಪ್ರೀತಿಗೆ ಧನ್ಯವಾದ.
– ಆಶಾ ಭಟ್, ರಾಬರ್ಟ್ ಸಿನಿಮಾ ಹಿರೋಯಿನ್
ನಮ್ಮೂರಲ್ಲಿ ನಾನೇ ನಟಿಸಿದ ಚಿತ್ರ ನೋಡುವ ಖುಷಿಯೇ ಬೇರೆ | ‘ಚಿಕ್ಕವಳಿದ್ದಾಗ ನಮ್ಮೂರಲ್ಲಿ ಬೇರೊಬ್ಬರು ನಟಿಸಿದ್ದ ಸಿನಿಮಾಗಳನ್ನು ನೋಡಲು ಬರುತ್ತಿದ್ದೇವು. ಆದರೆ, ಈಗ ನನ್ನ ಸಿನಿಮಾ ನೋಡುವುದಕ್ಕೆ ನನ್ನೂರಿಗೆ ಬಂದಿದ್ದೇನೆ. ಅದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ. ಚಿತ್ರ ರಿಲೀಸ್ ಆಗುತ್ತಿದ್ದಂತೆಯೇ ನನ್ನೂರಿಗೆ ಬಂದು ಸಿನಿಮಾ ನೋಡುವ ಆಸೆ ಇತ್ತು. ಆ ಕಾಲ ಈಗ ಕೂಡಿಬಂದಿದೆ ಎಂದು ಹೇಳಿದರು.
ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ
ಕಣ್ಣು ಹೊಡಿಯಾಕ ಸೀನ್ ಸ್ವಲ್ಪ ಕಷ್ಟವಾಗಿತ್ತು | ‘ದ ರಾನ್ ಆಫ್ ಕಚ್’ನಲ್ಲಿ ಚಿತ್ರೀಕರಣ ಮಾಡಿರುವ ‘ಕಣ್ಣು ಹೊಡಿಯಾಕ ಮೊನ್ನೆ ಕಲಿತೀನಿ’ ಹಾಡು ಅಭಿಮಾನಿಗಳಿಗೆ ಭಾರಿ ಮುದ ನೀಡಿದೆ. ಆದರೆ, ಅದರ ಹಿಂದಿನ ಕಷ್ಟವನ್ನು ಆಶಾ ಭಟ್ ತೋಡಿಕೊಂಡಿದ್ದಾರೆ. ಅಲ್ಲಿ ಅತಿಯಾದ ಉಪ್ಪು ಹಾಗೂ ತೀವ್ರ ಬಿಸಿಲು ಇದ್ದುದ್ದರಿಂದ ಶೂಟಿಂಗ್ ಮಾಡುವುದಕ್ಕೆ ಕಷ್ಟವಾಗಿತ್ತು. ಅಲ್ಲಿ ಕಣ್ಣು ಹೊಡೆಯುವುದು ಇರಲಿ… ಕಣ್ಣು ಬಿಡುವುದೂ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ.