ಸುದ್ದಿ ಕಣಜ.ಕಾಂ
ಶಿವಮೊಗ್ಗ: ಫ್ರೂಟ್ ಫ್ಲೈ (ಹಣ್ಣಿನ ನೊಣ)ದಿಂದ ಮಾವಿನ ಹಣ್ಣುಗಳನ್ನು ರಕ್ಷಿಸುವುದಕ್ಕೆ ಸರಳ ವಿಧಾನವೊಂದನ್ನು ಕಂಡು ಹಿಡಿಯಲಾಗಿದೆ. ಮನೆಯಲ್ಲಿಯೇ ಇದನ್ನು ಸಿದ್ಧಪಡಿಸಬಹುದಾಗಿದೆ.
ಮಾವಿನಲ್ಲಿ ಕಂಡುಬರುವ ಹಣ್ಣಿನ ನೊಣ ಬಾಧೆಯಿಂದ ಪ್ರತಿ ವರ್ಷ ಸರಾಸರಿ ಶೇ.25ರಷ್ಟು ಇಳುವರಿ ನಷ್ಟವಾಗುತ್ತಿದೆ. ಜತೆಗೆ ಹಣ್ಣುಗಳು ಗುಣಮಟ್ಟ ಕೂಡ ಕಳೆದುಕೊಳ್ಳುತ್ತಿವೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುತ್ತಿದ್ದು, ಕೀಟ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ರೈತರಿಗೆ ಮೋಹಕ ಬಲೆ ಹೆಚ್ಚು ಸಹಕಾರಿಯಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ
ಈ ಕೀಟ ಸಮಸ್ಯೆ ನಿವಾರಣೆಗೆ ಸಮಗ್ರ ಹತೋಟಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಇರುವ ಫಸಲನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಅದಕ್ಕಾಗಿ ರೈತರು ಮೋಹಕ ಬಲೆಗಳನ್ನು ಬಳಸುವುದು ಅತ್ಯವಶ್ಯಕ. ವಿದೇಶಗಳಿಗೆ ರಫ್ತು ಮಾಡುವ ಮಾವಿನ ಕಾಯಿ ಮತ್ತು ಹಣ್ಣುಗಳು ಫ್ರೂಟ್ ಫ್ಲೈ ಕೀಟಗಳಿಂದ ಮುಕ್ತವಾಗಿದೆಯೇ ಎಂಬುವುದನ್ನು ಪರಿಶೀಲಿಸಿದ ಬಳಿಕವೇ ರಫ್ತು ಮಾಡಲಾಗುತ್ತದೆ. ಒಂದೊಮ್ಮೆ ಈ ಕೀಟದ ಮರಿಗಳಿರುವುದು ಕಂಡುಬಂದರೆ ಅಂತಹ ಹಣ್ಣುಗಳನ್ನು ರಫ್ತಿಗೆ ತೆಗೆದು ಕೊಳ್ಳುವುದಿಲ್ಲ. ಪ್ರಮುಖವಾಗಿ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಬಂಗೆನಪಲ್ಲಿ ಮಾವು ಬೆಳೆಯುವವರು ಕೀಟಗಳ ಬಗ್ಗೆ ಎಚ್ಚರ ವಹಿಸಬೇಕು.
ಬಲಿತ ಕಾಯಿಗಳ ಮೇಲೆ ಹೆಣ್ಣು ನೊಣಗಳು ಚುಚ್ಚಿ ಸಿಪ್ಪೆಯ ಒಳಭಾಗದ ತಿರುಳಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ತಿರುಳಿನ ಒಳಗೆ ಮೊಟ್ಟೆಯಿಂದ ಹೊರಬರುವ ಮರಿಹುಳುಗಳು ತಿರುಳುನ್ನು ತಿನ್ನುತ್ತಾ ಬೆಳೆಯುತ್ತದೆ ಇದರಿಂದ ಹಣ್ಣಿನ ತಿರುಳು ಕೊಳೆಯುತ್ತಾ ಹೋಗಿ ಕೀಟ ಬಾಧೆಯಿರುವ ಹಣ್ಣು, ಅಥವಾ ಕಾಯಿ ಮೇಲೆ ರಂಧ್ರಗಳು ಕಂಡುಬಂದು ನಿರೀಕ್ಷೆಗಿಂತ ಮೊದಲೇ ಹಣ್ಣಾಗಿ ಅಥವಾ ಕೊಳೆತು ಉದುರುತ್ತವೆ. ಹೀಗಾಗಿ ನಿಯಮಿತವಾಗಿ ಕೀಟನಾಶಕ ಸಿಂಪಡಣೆ ಜೊತೆಗೆ ಮೋಹಕ ಬಲೆಗಳ ಬಳಕೆಯಿಂದ ರೈತರು ಉತ್ತಮ ಗುಣಮಟ್ಟದ ಫಸಲನ್ನು ಪಡೆಯಬಹುದಾಗಿದೆ.
ಮೋಹಕ ಬಲೆಯನ್ನು ಮನೆಯಲ್ಲೇ ತಯಾರಿಸುವ ವಿಧಾನ | ಒಂದು ಲೀಟರ್ ಖಾಲಿ ಪ್ಲಾಸ್ಟಿಕ್ ನೀರಿನÀ ಬಾಟಲಿ ಸ್ವಚ್ಛಗೊಳಿಸಿಕೊಂಡು, ಬಾಟಲಿ ಬಾಯಿಯಿಂದ 3-4 ಇಂಚುಗಳ ಕೆಳಗೆ ಎರಡು ದಿಕ್ಕುಗಳಲ್ಲಿ ಎದುರು ಬದುರಾಗಿ ಬ್ಲೇಡ್ ನಿಂದ 2 ಸೆಂ.ಮೀ. ಅಳತೆಯ ರಂಧ್ರಗಳನ್ನು ಮಾಡಬೇಕು. ಒಂದು ಪ್ಲೈವುಡ್ ತುಂಡನ್ನು 2 ಸೆಂ.ಮೀ. ಅಗಲ 5 ಸೆಂ.ಮೀ. ಉದ್ದ ಅಳತೆಯಲ್ಲಿ ಕತ್ತರಿಸಬೇಕು. ಬಳಿಕ ಮಿಥೈಲ್ ಯುಜಿನಾಲ್ ಹಾಗೂ ಡೈಕ್ಲೊರೊವಾಸ್ ತಲಾ 1 ಮಿ.ಲೀ. ಪ್ಲೈ ವುಡ್ ತುಂಡುಗಳಿಗೆ ಲೇಪಿಸಬೇಕು. ತುಂಡನ್ನು ದಾರ ಅಥವಾ ತಂತಿಯ ಸಹಾಯದಿಂದ ಬಾಟಲಿಯ ಒಳಗೆ ಸೇರಿಸಿ ಮರಗಳಿಗೆ ಕಟ್ಟಬೇಕು. ಕೊಯ್ಲಿನವರೆಗೆ ಪ್ರತಿ 10 ದಿನಗಳಿಗೊಮ್ಮೆ ಔಷಧಿ ಲೇಪಿಸಬೇಕು.
ಪ್ರತಿ ಹೆಕ್ಟೆರ್ ಗೆ 10 ಮೋಹಕ ಬಲೆ | ಮಾವಿನಲ್ಲಿ ಹಣ್ಣಿನ ನೊಣದ ನಿಯಂತ್ರಣಕ್ಕೆ ಪ್ರತಿ ಹೆಕ್ಟೆರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ತೂಗು ಹಾಕಬೇಕು. ಈ ಬಲೆಗಳಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1 ಮಿ.ಲೀ ಮಿಥೈಲ್ ಯುಜಿನಾಲ್ ಮತ್ತು 1 ಮಿ.ಲೀ. ಮೆಲಥಿಯಾನ್ 50 ಇ.ಸಿ. ಅಥವಾ ಡೈಕ್ಲೊರೋವಾಸ್ ಬೆರೆಸಿದ ದ್ರಾವಣವನ್ನು ಉಪಯೋಗಿಸಬೇಕು. ಪ್ರತಿ ಮೋಹಕ ಬಲೆಯಲ್ಲಿ 100 ಮಿ.ಲೀ ದ್ರಾವಣವನ್ನು ಹಾಕಬೇಕು ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.