ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೆಲೆ ಬಾಳುವ ಚಿನ್ನಾಭರಣವೇ ಇವರ ಟಾರ್ಗೆಟ್. ಪಾಲಿಶ್ ಮಾಡುವ ನೆಪದಲ್ಲಿ ಕಣ್ಮುಂದೆಯೇ ಚಿನ್ನವನ್ನು ದೋಚುತ್ತಾರೆ. ಇದುವರೆಗೆ ಶಿವಮೊಗ್ಗದಲ್ಲಿ ಇರದ ಹೊಸ ಗ್ಯಾಂಗೊಂದು ಸಕ್ರಿಯಗೊಂಡಿದೆ.
ಚಿನ್ನ, ಬೆಳ್ಳಿಯನ್ನು ತೊಳೆದು ಫಳ ಫಳ ಹೊಳೆಯುವಂತೆ ಮಾಡುವುದಾಗಿ ಮೋಸ ಮಾಡುವ `ಗೋಲ್ಡ್ ಪಾಲಿಶ್ ಗ್ಯಾಂಗ್’ ಜನರ ಮುಗ್ಧತೆಯ ಲಾಭ ಪಡೆದು ಮೋಸ ಮಾಡುತ್ತಿದ್ದಾರೆ.
ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ
ನಡೆದಿದ್ದೇನು | ಅಶೋಕ ನಗರ ಏಳನೆ ತಿರುವಿನಲ್ಲಿ ವಾಸವಿರುವ ಸಂಗೀತಾ ಎಂಬುವವರ ಮನೆಗೆ ಹೋದ ಇಬ್ಬರು ಯುವಕರು ಚಿನ್ನಾಭರಣ ತೊಳೆದುಕೊಡುವುದಾಗಿ ನಂಬಿಸಿದ್ದಾರೆ. ಅದಕ್ಕಾಗಿ ಸಂಗೀತಾ ಅವರು ಮೊದಲು ಕಾಲುಂಗುರ ನೀಡಿದ್ದಾರೆ. ಮಾತಿನಂತೆ ಅದನ್ನು ದ್ರವವೊಂದಕ್ಕೆ ಹಾಕಿ ತೊಳೆದು ಕೊಟ್ಟಿದ್ದಾರೆ. ನಂತರ ಚಿನ್ನವನ್ನೂ ಇದೇ ರೀತಿ ತೊಳೆದುಕೊಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿ ತಾಳ ಸರವನ್ನು ನೀಡಿದ್ದಾರೆ.
ಈ ರೀತಿಯ ಮೋಸದ ಜಾಲಗಳಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಬಂಗಾರ ಫಳ ಫಳ ಹೊಳೆಯುವಂತೆ ಮಾಡಿಕೊಡುವುದಾಗಿ ಹೇಳಿದ್ದಲ್ಲಿ ಅಂತಹವರನ್ನು ಯಾವುದೇ ಕಾರಣಕ್ಕೂ ನಂಬ ಬೇಡಿ.
– ಪೊಲೀಸ್ ಇಲಾಖೆ, ಶಿವಮೊಗ್ಗ
ಆಗ ಚಿನ್ನದ ಸರವನ್ನು ದ್ರವಕ್ಕೆ ಹಾಕಿದ್ದಾರೆ. ಬಳಿಕ ಬ್ರಶ್ ಬಳಸಿ ಉಜ್ಜಿದ್ದಾರೆ. ನಂತರ ಅದನ್ನು ಅರಿಷಿಣ ಪುಡಿ ಹಾಕಿ ಪೇಪರ್ ನಲ್ಲಿ ಕಟ್ಟಿಕೊಟ್ಟಿದ್ದಾರೆ. ಎರಡು ಗಂಟೆಯವರೆಗೆ ತೆರೆಯದಂತೆ ಸೂಚನೆ ಕೂಡ ನೀಡಿದ್ದಾರೆ. ಅದರಂತೆ, ಸಂಗೀತಾ ಅವರು 2 ಗಂಟೆ ಬಳಿಕ ನೋಡಲಾಗಿ ತಾಳಿ ಸರ ಅಲ್ಲಿ ಕಡಿದಿತ್ತು. ತೂಕ ಮಾಡಿಸಿದಾಗ 23 ಗ್ರಾಂ ಕಡಿಮೆ ಇರುವುದು ಗೊತ್ತಾಗಿದೆ. ತಕ್ಷಣ ಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅವರು ನೀಡಿರುವ ದೂರಿನನ್ವಯ, 25 ಮತ್ತು 27 ವರ್ಷದ ಇಬ್ಬರು ಯುವಕರು ಬಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
https://www.suddikanaja.com/2021/02/03/chain-snatching-pulsar-gang-re-active-in-shivamogga/