ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವರ್ಷ ಅವಧಿಯಲ್ಲಿ 109 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಇವುಗಳ ಪೈಕಿ, 89 ವಿವಾಹಗಳನ್ನು ತಡೆಯಲಾಗಿದೆ ಎಂದು ರಾಷ್ಟೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಚರ್ಚೆ ಮತ್ತು ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹ ತಡೆಗೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಿಸುವುದಕ್ಕಿಂತ ಆಪ್ತ ಸಮಾಲೋಚನೆ, ಪರಸ್ಪರ ಮಾತುಕತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಖಾಸಗಿ ಸಂಸ್ಥೆಗಳಲ್ಲೂ ಆಂತರಿಕ ದೂರು ಸಮಿತಿ | ಎಲ್ಲ ಸರ್ಕಾರಿ ಕಚೇರಿಗಳು ಮಾತ್ರವಲ್ಲದೆ, ಖಾಸಗಿ ಸಂಸ್ಥೆಗಳಲ್ಲೂ ಮಹಿಳೆಯರು ದೂರು ದಾಖಲಿಸಲು ಅನುಕೂಲವಾಗುಂತೆ ಆಂತರಿಕ ದೂರು ಸಮಿತಿ ಕಡ್ಡಾಯವಾಗಿ ರಚಿಸಬೇಕು. ಈ ಕುರಿತು ಅಧಿಕಾರಿಗಳು ಪರಿಶೀಲಿಸಿ ಖಾತ್ರಿ ಪಡಿಸಬೇಕು ಎಂದು ನಿರ್ದೇಶಿಸಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಸೌತ್ ಆಫ್ರಿಕಾ ರೂಪಾಂತರ ಕೊರೊನಾ ವೈರಸ್ ಆತಂಕ, ಮೈ ಜುಮ್ಮೆನಿಸುವ ಸೋಂಕಿತನ ಟ್ರಾವೆಲ್ ಹಿಸ್ಟರಿ
ಕಟ್ಟಡ ಪೂರ್ಣಗೊಳಿಸಿ | ಸಖಿ ಒನ್ ಸ್ಟಾಪ್ ಸೆಂಟರ್ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಸ್ವಂತ ಸುಸಜ್ಜಿತ ಕಟ್ಟಡ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಸಖಿ ಕೇಂದ್ರದಲ್ಲಿ, ನೊಂದ ಮಹಿಳೆಯರಿಗೆ ವೈದ್ಯಕೀಯ, ಆಪ್ತ ಸಮಾಲೋಚನೆ, ಕಾನೂನು ನೆರವು ಒಂದೇ ಸೂರಿನಡಿ ಒದಗಿಸಲಾಗುತ್ತದೆ. ಈ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಗ್ರಾಮೀಣ ಮಟ್ಟದಲ್ಲೂ ನಡೆಯಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್.ಪಿ. ಕೆ.ಎಂ.ಶಾಂತರಾಜ್, ಎ.ಎಸ್.ಪಿ ಎಚ್.ಟಿ.ಶೇಖರ್, ಸಿಇಒ ಎಂ.ಎಲ್.ವೈಶಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುರೇಶ್ ಉಪಸ್ಥಿತರಿದ್ದರು.