ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸರ್ಕಾರದ ಆದೇಶದ ಪ್ರಕಾರ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ಅಡಿಯಲ್ಲಿ ಕಡ್ಡಾಯವಾಗಿ ಮೀಸಲಿರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.
READ |ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದೆ. ಕೋವಿಡ್ ಪಾಸಿಟಿವ್ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಸೌಲಭ್ಯವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಜಿಲ್ಲಾಡಳಿತದಿಂದ ಅನುಮತಿ ಕಡ್ಡಾಯ | ಅಂತಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಆಸ್ಪತ್ರೆಗಳು ತಮ್ಮಲ್ಲಿನ ಜನರಲ್ ಹಾಸಿಗೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿರೇಟರ್ ಸೌಲಭ್ಯ ಹೊಂದಿರುವ ಬೆಡ್ಗಳ ಪೈಕಿ ಶೇ.50ರಷ್ಟನ್ನು ಸರ್ಕಾರದ ಕೋಟಾದ ಅಡಿ ನೀಡಬೇಕು. ಒಂದು ವೇಳೆ ಈ ಬೆಡ್ಗಳನ್ನು ಬಳಸುವುದಿದ್ದರೆ ಜಿಲ್ಲಾಡಳಿತದಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಈ ನಿರ್ದೇಶನ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಈ ಬಾರಿ ಕ್ರಮ ಜರುಗಿಸುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದರು.
ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಈ ಹಿಂದೆಯೇ ನಿಗದಿಪಡಿಸಿದೆ. ಅದರಂತೆ ಶುಲ್ಕ ವಿಧಿಸಲು ಅವಕಾಶವಿದೆ. ಹೆಚ್ಚುವರಿ ಶುಲ್ಕ ವಿಧಿಸುವ ಕುರಿತು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಎಚ್.ಟಿಶೇಖರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಸಿಮ್ಸ್ ನಿರ್ದೇಶಕ ಡಾ.ಸಿದ್ಧಪ್ಪ, ವಿವಿಧ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಪಿಎಲ್ ಕಾರ್ಡ್ ಪಡೆಯಲು ಯಾರು ಅರ್ಹರು?, ಅನರ್ಹರು ಕಾರ್ಡ್ ಹಿಂದಿರುಗಿಸಲು ಡಿಸಿ ಖಡಕ್ ವಾರ್ನಿಂಗ್