ಸುದ್ದಿ ಕಣಜ.ಕಾಂ
ಬೆಂಗಳೂರು: ಬ್ಲ್ಯಾಕ್ ಫಂಗಸ್ ಸಮಸ್ಯೆ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಅಗತ್ಯವಿರುವ ಔಷಧವನ್ನು ಕೂಡಲೇ ಪೂರೈಕೆ ಮಾಡುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕಪ್ಪು ಶಿಲೀಂದ್ರ (ಬ್ಲ್ಯಾಕ್ ಫಂಗಸ್) ಚಿಕಿತ್ಸೆಗೆ ಅಗತ್ಯ ಇರುವ ಲೈಪೋಸೋಮಲ್ ಆಂಫೋಟೆರಿಸಿನ್ ಬಿ ಔಷಧಿಯ 20,000 ವಯಲ್ಗಳನ್ನು ಶೀಘ್ರವೇ ಪೂರೈಕೆ ಮಾಡುವಂತೆ ರಾಜ್ಯ ಔಷಧ ಉಗ್ರಾಣ ಕೇಂದ್ರವು ಕೇಂದ್ರ ಸರ್ಕಾರವನ್ನು ಕೋರಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಪ್ರಮಾಣದ ಔಷಧಗಳನ್ನು ತರಿಸಿಕೊಳ್ಳುವುದರತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮತ್ತೊಂದು ಭೀಕರತೆಗೆ ಜನ ಸಿಲುಕುವ ಅಪಾಯವಿದೆ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ಟ್ವೀಟ್ನಲ್ಲಿ ಹೇಳಿದ್ದೇನು | ಕಪ್ಪು ಶಿಲೀಂದ್ರ ಸಮಸ್ಯೆ ರಾಜ್ಯದಲ್ಲಿ ಈಗಾಗಲೇ ಗಂಭೀರ ಸ್ವರೂಪದಲ್ಲೇ ಕಾಣಿಸಿಕೊಂಡಿದೆ. ಹಲವರು ಬಲಿಯಾಗಿದ್ದಾರೆ. ಕೋವಿಡ್ನಿಂದ ಗುಣವಾಗುವ 400 ಮಂದಿ ಪ್ರತಿ ವಾರ ಈ ಸಮಸ್ಯೆಗೆ ಸಿಲುಕುವ ಸಾಧ್ಯತೆಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ತಿಳಿಸಿದೆ. ಹೀಗಿರುವಾಗ ಎದುರಾಗಿರುವ ಔಷಧ ಕೊರತೆ ದುರಂತದ ಮುನ್ಸೂಚನೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಇದು ಸಲಹೆಯಷ್ಟೆ ರಾಜಕೀಯ ಬಣ್ಣ ಬೇಡ | ಇದು ಸಂದಿಗ್ಧ ಕಾಲದ ಸೂಕ್ತ ಸಲಹೆ ಎಂದು ಎಲ್ಲರೂ ಭಾವಿಸಿಕೊಳ್ಳಬೇಕು. ಹಲವು ದಿನಗಳಿಂದ ಸರ್ಕಾರಕ್ಕೆ ನಾನು ನೀಡಿದ ಸಲಹೆಗಳನ್ನು ಕೆಲ ಕಿಡಿಗೇಡಿಗಳು ‘ರಾಜಕೀಯ’ವೆಂದು ಭಾವಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಲಾಕ್ ಡೌನ್ ಬಗ್ಗೆಯೂ ಸರ್ಕಾರಕ್ಕೆ ಡಿಚ್ಚಿ ನೀಡಿದ್ದಾರೆ. ಸರ್ಕಾರ ಲಾಕ್ಡೌನ್ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ವರದಿಯಾಗುತ್ತಿದೆ. ಲಾಕ್ಡೌನ್ ವಿಸ್ತರಿಸುವುದೇ ಆದರೆ, ಅದು ‘ಜನಹಿತದ ಲಾಕ್ಡೌನ್’ ಆಗಿರಲಿ. ಆರ್ಥಿಕ,ಆಹಾರ ಪ್ಯಾಕೇಜ್, ಪರಿಹಾರ ಕ್ರಮಗಳು ಉದ್ದೇಶಿತ ವಿಸ್ತರಿತ ಲಾಕ್ಡೌನ್ನಲ್ಲಿರಲಿ. ಸರ್ವಪಕ್ಷಗಳ ಸಭೆಯಲ್ಲಿ ನಾವು ಸೂಚಿಸಿದ್ದೂ ‘ಜನಹಿತದ ಲಾಕ್ಡೌನ್’ ಕಲ್ಪನೆಯೇ ಆಗಿತ್ತು ಎಂದು ತಿಳಿಸಿದ್ದಾರೆ.
ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಿಗೆ ಶಾಕಿಂಗ್ ನ್ಯೂಸ್, ವಿದ್ಯುತ್ ಕೊರತೆ ಹಿನ್ನೆಲೆ ಅನಿಯಮಿತ ಲೋಡ್ ಶೆಡ್ಡಿಂಗ್