ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಗಾನೆ ಸಮೀಪ ನಿರ್ಮಾಣ ಹಂತದಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನೇರ ಮತ್ತು ಪರೋಕ್ಷವಾಗಿ ಐದು ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ವಿದ್ಯುತ್, ನೀರು ಸೇರಿ ಇನ್ನಿತರ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ ಅಂದಾಜು 11.60 ಕೋಟಿ ರೂಪಾಯಿ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನರಸಿಂಹರಾಜಪುರ ರಸ್ತೆಯ ವಿನಾಯಕ ನಗರದ ಸಮೀಪ ಆಯುಷ್ ವಿಶ್ವವಿದ್ಯಾಲಯಕ್ಕೆ 78 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದ್ದು, ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ.
ಸಮಗ್ರ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಗೆ ಅಂದಾಜು 290 ಕೋಟಿ ರೂಪಾಯಿ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಹ್ಯಾದ್ರಿ ಕಾಲೇಜು ಅಭಿವೃದ್ದಿಗೆ 14.21 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಅಭಿವೃದ್ದಿಗೆ 12 ಕೋಟಿ ಅನುದಾನ ನೀಡಲು ರಾಜ್ಯ ಸರ್ಕಾರ ಒಪ್ಪಿದೆ. ಕಟ್ಟಡ ರಿಪೇರಿ, ಹಾಸ್ಟೆಲ್ ಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು.
ಕ್ಯಾನ್ಸರ್ ಆಸ್ಪತ್ರೆಗೆ ಗ್ರೀನ್ ಸಿಗ್ನಲ್ | ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 50 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಘಟಕ, 100 ಪ್ಯಾರಾ ಮೆಡಿಕಲ್, 25 ಲ್ಯಾಬ್ ಸಿಬ್ಬಂದಿಗಳನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ 5 ಎಕರೆ ಪ್ರದೇಶದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರಿಸಲಾಗಿದೆ ಎಂದು ತಿಳಿಸಿದರು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮೂರು ಲೈಫ್ ಸಪೋರ್ಟಿಂಗ್ ಆಂಬ್ಯುಲೆನ್ಸ್ ಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಜಿಲ್ಲೆಯ ಪ್ರಮುಖ ವೈದ್ಯರ ಸಮ್ಮುಖದಲ್ಲಿ ಸಂಸದರು ಹಸ್ತಾಂತರಿಸಿದರು. ಈ ಮೂಲಕ ಆಂಬ್ಯುಲೆನ್ಸ್ ಗಳ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.
ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಕೈಗಾರಿಕೆ ಅಭಿವೃದ್ಧಿ ಬನಿಗಮದ ರಾಜ್ಯ ಉಪಾಧ್ಯಕ್ಷ ದತ್ತಾತ್ರಿ, ಮೇಯರ್ ಸುನೀತಾ ಅಣ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಉಪಸ್ಥಿತರಿದ್ದರು.
ಮುಂದಿನ ಜೂನ್ ಅಂತ್ಯಕ್ಕೆ ಶಿವಮೊಗ್ಗದಲ್ಲಿ ವಿಮಾನ ಹಾರಾಟ, ಯಡಿಯೂರಪ್ಪ ಘೋಷಣೆ