ಸುದ್ದಿ ಕಣಜ.ಕಾಂ
ಶಂಕರಘಟ್ಟ(ಶಿವಮೊಗ್ಗ): ಮೈಸೂರು ವಿಶ್ವವಿದ್ಯಾಲಯ ನಡೆಸುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನಾಳೆ (ಜುಲೈ 25) ನಗರದ ವಿವಿಧ ಕಾಲೇಜುಗಳಲ್ಲಿ ನಡೆಯಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷಾ ಸಂಯೋಜಕ ಡಾ. ರಾಜೇಶ್ವರ್ ತಿಳಿಸಿದ್ದಾರೆ.
https://www.suddikanaja.com/2021/07/15/kset-online-training/
ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗಾಗಿ ಮೂರು ಕ್ಲಸ್ಟರ್ ಗಳಡಿ ಒಟ್ಟು ಹತ್ತು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ಕಳೆದ ಏಪ್ರಿಲ್ 11ರಂದು ನಿಗದಿಯಾಗಿದ್ದ ಪರೀಕ್ಷೆ ಮೊದಲಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಮುಷ್ಕರ ಮತ್ತು ನಂತರ ಕೋವಿಡ್-19 ಲಾಕ್ಡೌನ್ ಕಾರಣದಿಂದಾಗಿ ಮುಂದೂಡಲಾಗಿತ್ತು.
ಪರೀಕ್ಷಾ ಕೇಂದ್ರಗಳ ವಿವರ | ಸಹ್ಯಾದ್ರಿ ಕಾಲೇಜು ಆವರಣದಲ್ಲಿರುವ ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ವಿಜ್ಞಾನ ಕಾಲೇಜು ಮತ್ತು ಸಹ್ಯಾದ್ರಿ ವಾಣಿಜ್ಯ ಕಾಲೇಜು ಮೊದಲ ಕ್ಲಸ್ಟರ್ ನಲ್ಲಿದ್ದರೆ, ಡಿವಿಎಸ್ ಕಲೆ ಮತ್ತು ವಿಜ್ಞಾನ ಕಾಲೇಜು, ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಡಿವಿಎಸ್ ಸಂಯುಕ್ತ ಪಿಯು ಕಾಲೇಜು ಎರಡನೆಯ ಕ್ಲಸ್ಟರ್ ನಲ್ಲಿದೆ. ಇನ್ನು ಎಸ್.ಆರ್.ಎನ್.ಎಂ.ಎನ್ ಅನ್ವಯಿಕ ವಿಜ್ಞಾನ ಕಾಲೇಜು, ಎ.ಟಿ.ಎನ್.ಸಿ.ಸಿ ಕಾಲೇಜು, ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜು ಮತ್ತು ಎಚ್.ಎಸ್.ಆರ್ ನ್ಯಾಷನಲ್ ಪಿಯು ಕಾಲೇಜುಗಳನ್ನು ಮೂರನೆಯ ಕ್ಲಸ್ಟರ್ ಗಳಾಗಿ ವಿಂಗಡಿಸಲಾಗಿದೆ.
ಪರೀಕ್ಷೆಯ ಬಗ್ಗೆ ಒಂದಿಷ್ಟು ಮಾಹಿತಿ | ಪರೀಕ್ಷೆಯ ಮೊದಲ ಪತ್ರಿಕೆ ಬೆಳಗ್ಗೆ 9.30ರಿಂದ 10.30ರ ವರೆಗೆ ನಡೆಯಲಿದ್ದು, ಮೂವತ್ತು ನಿಮಿಷದ ಬಿಡುವಿನ ಬಳಿಕ ಎರಡನೆಯ ಪತ್ರಿಕೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ಕಡ್ಡಾಯವಾಗಿ ಇವುಗಳ ಜತೆ ಬನ್ನಿ | ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ ಮತ್ತು ಪ್ರವೇಶಾತಿ ಚೀಟಿಯೊಂದಿಗೆ ಬೆಳಗ್ಗೆ 8.30ಕ್ಕೆ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ವರದಿ ಮಾಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿ ಅನ್ವಯವಾಗುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಲಾಗಿದೆ.
https://www.suddikanaja.com/2021/04/10/k-set-exams-in-shivamogga/