ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಿ, `ಕಮಲ’ ವಿನ್ಯಾಸದಿಂದ ಈ ಸಮಸ್ಯೆಯಾಗುತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡುವಂತೆ ಒತ್ತಾಯ ಕೇಳಿಬಂದಿದೆ. ಜತೆಗೆ, ನೀಲನಕ್ಷೆಯಲ್ಲಿ ತೋರಿಸಿರುವಂತೆ `ಕಮಲ’ದ ವಿನ್ಯಾಸದಲ್ಲಿ ಕಟ್ಟಡ ನಿರ್ಮಿಸಿದ್ದಲ್ಲಿ ಕಾನೂನಾತ್ಮಕ ತೊಡಕು ಉಂಟಾಗುವ ಸಾಧ್ಯತೆ ಆಗುವುದಾಗಿಯೂ ಹೇಳಲಾಗುತ್ತಿದೆ.

https://www.suddikanaja.com/2021/03/25/plastic-awareness-by-swr/

ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಹೆಸರು ನಿಲ್ದಾಣಕ್ಕೆ ಇಡುವುದು ಹೆಚ್ಚು ಸೂಕ್ತ. ಈ ನಿರ್ಧಾರ ಸರ್ಕಾರಕ್ಕೂ ಶೋಭೆ ತರುತ್ತದೆ ಎಂದು ಹೇಳಿದರು.
ವಿನ್ಯಾಸದಲ್ಲೇನು ತೊಡಕು | ಈ ಹಿಂದೆ ಮಾಯಾವತಿ ಅವರು ಉತ್ತರ ಪ್ರದೇಶದ ಸಿಎಂ ಆಗಿದ್ದಾಗ ಬಿ.ಎಸ್.ಪಿ. ಪಕ್ಷದ ಚಿಹ್ನೆಯಾಗಿದ್ದ ಆನೆಗಳ ಪ್ರತಿಮೆಗಳನ್ನು ನಿರ್ಮಿಸಿದ್ದರು. ಈ ವಿಚಾರ ನ್ಯಾಯಾಲಯ ಮೆಟ್ಟಿಲೇರಿತ್ತು. ಆಗ ನ್ಯಾಯಾಲಯ ಪಕ್ಷದ ಚಿಹ್ನೆ ಬಳಸಬಾರದೆಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದರು.

ಒಂದುವೇಳೆ, ಪಕ್ಷಗಳು ಈ ರೀತಿ ಚಿಹ್ನ ಬಳಸಿದ್ದಲ್ಲಿ ಆ ಚಿಹ್ನೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು. ಹೀಗಾಗಿ, ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ವಿನ್ಯಾಸವನ್ನು ಬದಲಿಸಬೇಕು ಎಂದು ಆಗ್ರಹಿಸಿದರು.

ಒಂದುವೇಳೆ, ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳದಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭದ್ರಾವತಿ ಗಣೇಶ್, ಪ್ರಶಾಂತ್ ಸಾಗರ, ಗೋವಿಂದಸ್ವಾಮಿ, ಸತ್ಯನಾರಾಯಣ ಉಪಸ್ಥಿತರಿದ್ದರು.

https://www.suddikanaja.com/2021/05/14/shivamogga-airport-will-complete-within-8-months/

error: Content is protected !!