ಸುದ್ದಿ ಕಣಜ.ಕಾಂ | KARNATAKA | WILD LIFE
ಶಿವಮೊಗ್ಗ: ಪಶ್ಚಿಮಘಟ್ಟದ ಮಳೆ ಕಾಡುಗಳಲ್ಲಿ ವಿರಳವಾಗಿ ಕಣ್ಣಿಗೆ ಬೀಳುವ `ಅತಿ ನೇರಳೆ ಬಣ್ಣದ ಏಡಿ (purple tree crab)‘ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಲಯ ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಪತ್ತೆಯಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಉಪನ್ಯಾಸಕ ಸುಪ್ರೀತ್ ಕಡಕೋಳ್ ಎಂಬುವವರ ತಂಡಕ್ಕೆ ಸೆಪ್ಟೆಂಬರ್ 11ರಂದು ರಸ್ತೆ ಬದಿ ಈ ಏಡಿ ಸಿಕ್ಕಿದೆ.

READ | ಮಲೆನಾಡಿಗೆ ಅಪಾಯದ ಮುನ್ಸೂಚನೆ ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಆಪತ್ತು
2015ರಲ್ಲಿ ಮಹಾರಾಷ್ಟ್ರದ ಅಂಬೋಲಿಯ ಮರದ ಪೊಟರೆಯಲ್ಲಿ ಈ ವಿಶಿಷ್ಟ ಪ್ರಬೇಧದ ಏಡಿ ಪತ್ತೆಯಾಗಿತ್ತು. ತದನಂತರ, ಗೋವಾದ ಹಾಥಿಪಾಲ್ ನಲ್ಲಿಯೂ ಕಂಡುಬಂದಿತ್ತು. ಆಗ ಈ ವಿಶಿಷ್ಟ ಜೀವಿಯ ಮೇಲೆ ಸಂಶೋಧಕರ ಗಮನ ಹರಿಯಿತು.
2017ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಕಣಿವೆಯಲ್ಲಿ ಅತಿ ನೇರಳೆ ಬಣ್ಣದ ಏಡಿ ಪತ್ತೆಯಾಗಿತ್ತು. ಬಳಿಕ ಈ ಪ್ರಬೇಧದ ಏಡಿ ಮತ್ತೆಲ್ಲೂ ಕಂಡುಬಂದ ಬಗ್ಗೆ ವರದಿಯಾಗಿಲ್ಲ. ಈಗ ಮತ್ತೊಮ್ಮೆ ಸಂಶೋಧನಾ ತಂಡಕ್ಕೆ ಕಾರವಾರದಲ್ಲಿ ಕಂಡುಬಂದಿದೆ.
ಅತಿ ನೇರಳೆ ಏಡಿಗಳ ಆವಾಸ ಸ್ಥಾನ
ನೇರಳೆ ಬಣ್ಣದ ಏಡಿಗಳು ಮರದ ಪೊಟರೆಯಲ್ಲಿ ನಿಂತ ನೀರು ಹಾಗೂ ಬಂಡೆಯಲ್ಲಿನ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲಿಯೇ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಕ್ರಿಯೆ ಕೂಡ ಮಾಡುತ್ತವೆ. ಬೇಸಿಗೆ ಶುರುವಾಗುತ್ತಿದಂತೆಯೇ ಬಂಡೆಗಳ ಮೇಲಿನ ಕುಳಿಗಳಲ್ಲಿ ಕಾಣಸಿಗುತ್ತಿದ್ದ ಏಡಿಗಳು ಕಣ್ಮರೆಯಾಗುತ್ತವೆ. ಇದು ಅಳಿವಿನಂಚಿನಲ್ಲಿರುವ ಪ್ರಾಣಿ ಅಲ್ಲವಾದರೂ ವಿಶಿಷ್ಟ ಎನ್ನುವುದು ತಜ್ಞರ ಅಭಿಪ್ರಾಯ.
ಪಶ್ಚಿಮಘಟ್ಟದಲ್ಲಿ ಕಂಡುಬರುವ `ಅತಿ ನೇರಳೆ ಬಣ್ಣದ ಏಡಿ’ಯ ಆವಾಸ ಸ್ಥಾನ ಆದಿಯಾಗಿ ಎಲ್ಲವನ್ನೂ ಸಂಶೋಧನೆಗೆ ಒರೆ ಹಚ್ಚುವ ಕೆಲಸ ಆಗಬೇಕಿದೆ.