ಕಳೆದ ಒಂದು ವಾರದಿಂದ ಆಂಬ್ಯುಲೆನ್ಸ್ ನಾಪತ್ತೆ!

 

 

ಸುದ್ದಿ‌ ಕಣಜ.ಕಾಂ | TALUK | SPECIAL REPORT
ಬ್ಯಾಕೋಡು(ಸಾಗರ): ತಾಲ್ಲೂಕಿನ ಕರೂರು ಹೋಬಳಿಯ ತುಮರಿ- ಬ್ಯಾಕೋಡಿನಲ್ಲಿ ಅಘೋಷಿತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ರಿಪೇರಿಗೆ ತೆರಳಿದ ಆಂಬ್ಯುಲೆನ್ಸ್ ವಾಪಸ್ ಆಗದೇ ಇರುವುದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

IMG 20210925 132956
ರಿಪೇರಿಗಾಗಿ ಕೊಂಡೊಯ್ದ ಆಂಬ್ಯುಲೆನ್ಸ್.

ಕಳೆದ ವಾರವಷ್ಟೇ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೇ ಖಾಸಗಿ ವಾಹನದಲ್ಲೇ ಹೆರಿಗೆಯಾದ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಈ ಭಾಗದ ಸುಮಾರು 25 ಸಾವಿರ ಜನರ ಸೇವೆಗಾಗಿ ಇದ್ದಂತಹ ತುಮರಿ ಆಂಬ್ಯುಲೆನ್ಸ್ ಕಳೆದ ಹಲವು ದಿನಗಳ ಹಿಂದೆ ರಿಪೇರಿಗೆಂದು ತೆಗೆದುಕೊಂಡು‌ ಹೋಗಿದ್ದು ನಾಲ್ಕೈದು ದಿನಗಳಾದರೂ ಮರಳಿಲ್ಲ. ಇದ್ದರಿಂದ ಈ ಭಾಗದಲ್ಲಿನ ಅನಾರೋಗ್ಯ ಪೀಡಿತರಿಗೆ, ಗರ್ಭಿಣಿಯರಿಗೆ ತೊಂದರೆ ಆಗುತ್ತಿದೆ.

ಕೇವಲ ನೆಪ ಮಾತ್ರಕ್ಕೆ ಆಂಬ್ಯುಲೆನ್ಸ್ ನೀಡುವುದು ಸರಿಯಲ್ಲ. ಸರಿಯಾದ ಸುಸ್ಥಿತಿಯಲ್ಲಿರುವ ವೆಂಟಿಲೇಟರ್ ಇರುವ ಆಂಬ್ಯುಲೆನ್ಸ್ ನೀಡಬೇಕು. ಇದರಿಂದ ಈ‌ ಭಾಗದ ಜನರಿಗೆ ತುರ್ತು ಸ್ಥಿತಿಯಲ್ಲಿ ಅನುಕೂಲ ಆಗಲಿದೆ.
– ಜಿ.ಟಿ. ಸತ್ಯನಾರಾಯಣ್, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ

ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ತಾಲ್ಲೂಕು ಆಡಳಿತ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಬೇಜವಾಬ್ದಾರಿ ತೋರಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಕರೂರು ಬಾರಂಗಿ ಹೋಬಳಿಯ ಬಹುತೇಕ ಎಲ್ಲ ಗ್ರಾಮಗಳು ಗುಡ್ಡ ಗಾಡಿನಿಂದ ಕೂಡಿದ್ದು ಅವಶ್ಯಕ ಮೂಲ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಪ್ರಮುಖ ಹಳ್ಳಿಗಳಿಗೆ ರಸ್ತೆಗಳೇ ಇಲ್ಲದಿರುವುದರಿಂದ ಈ ಭಾಗದ ಜನರಿಗೆ ದಿನನಿತ್ಯ ಸಂಕಷ್ಟದಿಂದ ಜೀವನ ನಡೆಸುವಂತಾಗಿದೆ.

READ | ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ‌ ನೀಡಿದ ಸರ್ಕಾರ, ಕಂದಾಯ ಇಲಾಖೆಯಲ್ಲಿ ಹುದ್ದೆಗಳು ಭರ್ಜರಿ ಖಾಲಿ,‌ ನಡೆಯಲಿದೆ ನೇಮಕಾತಿ

25,000 ಜನರಿರುವ ಭಾಗಕ್ಕೆ ಒಂದು ಆಂಬ್ಯುಲೆನ್ಸ್
25 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ ಇರುವ ಈ ಭಾಗಕ್ಕೆ ಸುಸ್ಥಿತಿಯಲ್ಲಿ ಇರದ ಒಂದು ಆಂಬ್ಯುಲೆನ್ಸ್ ನೀಡಲಾಗಿದೆ. ಈಗ ಅದನ್ನು ರಿಪೇರಿಯ ನೆಪ ಹೇಳಿ ಕಳೆದೊಂದು ವಾರದಿಂದ ಈ ಭಾಗದಲ್ಲಿ ಸೇವೆಗೆ ಇಲ್ಲದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಮರಳಲಿದೆ ಆಂಬ್ಯುಲೆನ್ಸ್
ಇನ್ನೆರಡು ದಿನಗಳಲ್ಲಿ ಆಂಬ್ಯುಲೆನ್ಸ್ ವಾಪಸ್ ಆಗಲಿದೆ ಎಂದು ಏಜೆನ್ಸಿ ತಿಳಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾಗರ ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

READ | ಸಾಲದ‌ ಹಣ ವಾಪಸ್ ಕೇಳಿದ್ದಕ್ಕೆ ರಿಯಲ್‌ ಎಸ್ಟೇಟ್  ಉದ್ಯಮಿ‌ ಮರ್ಡರ್

ಈ ಭಾಗದ ಜನರ ಬೇಡಿಕೆಯೇನು?

  1. ವೆಂಟಿಲೇಟರ್ ಹೊಂದಿರುವ ಸುಸಜ್ಜಿತವಾದ ಎರಡು ಆಂಬ್ಯುಲೆನ್ಸ್ ಈ ಭಾಗಕ್ಕೆ ನೀಡಬೇಕು.
  2. ಹೊಳೆಬಾಗಿಲಿನಲ್ಲಿಯೇ ಎರಡು ಲಾಂಚ್ ನಿಲುಗಡೆ ಮಾಡಬೇಕು ಹಾಗೂ ಗಂಭೀರ ಅನಾರೋಗ್ಯ ಪೀಡಿತರನ್ನು ಸಾಗರಕ್ಕೆ ಸಾಗಿಸಲು ದಿನದ 24/7 ಸೇವೆ ನೀಡಬೇಕು.
  3. ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಬೇಜವಾಬ್ದಾರಿ ತೋರಿರುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕು.
  4. ತೀವ್ರವಾಗಿ ಉಂಟಾಗಿರುವ ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
  5. ಈ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಸರ್ಕಾರ ಗಮನ ಹರಿಸಬೇಕು.

ವರದಿ‌ | ಎಂ. ಸುಕುಮಾರ್

error: Content is protected !!