ಸುದ್ದಿ ಕಣಜ.ಕಾಂ | KARNATAKA | EDUCATION CORNER
ಶಿವಮೊಗ್ಗ: ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಜಗತ್ತಿನ ಶೇ. 2ರ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ.ಜೆ.ಗಿರೀಶ್ ಮತ್ತು ಡಾ.ಬಿ.ಇ.ಕುಮಾರಸ್ವಾಮಿ ಸ್ಥಾನ ಪಡೆದಿದ್ದಾರೆ.
ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಜೆರೋಯಿನ್ ಬಾಸ್, ಕೆವಿನ್ ಬೋಯಾಕ್ ಮತ್ತು ಜಾನ್ ಪಿ.ಎ. ಇವೊನ್ನಿಡಿಸ್ ಅವರನ್ನು ಒಳಗೊಂಡ ಸಂಶೋಧನಾ ತಂಡ ಸಿದ್ಧಪಡಿಸಿರುವ ವಿಶ್ವದ ಶೇ. 2 ವಿಜ್ಞಾನಿಗಳ ಡೇಟಾಬೇಸ್ ಅಕ್ಟೋಬರ್ 19ರಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ.
ಪಟ್ಟಿಯು 22 ವಿಜ್ಞಾನ ವಿಷಯಗಳು ಮತ್ತು 176 ಉಪವಿಜ್ಞಾನ ವಿಷಯಗಳನ್ನು ವಿಂಗಡಿಸಿ ರಚಿಸಿರುವುದಾಗಿದ್ದು, ವೃತ್ತಿ ಜೀವಮಾನ ಸಾಧಕರು ಮತ್ತು 2021ನೇ ಸಾಲಿನ ಸಾಧಕರು ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ.
ಪಟ್ಟಿಯಲ್ಲಿ ಕುವೆಂಪು ವಿವಿಯ ಯಾರಿಗೆ ಸ್ಥಾನ?
2021ರ ಸಾಲಿನ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ 54,804ನೇ ಸ್ಥಾನವನ್ನು ಪಡೆದಿರುವ ವಿವಿಯ ಗಣಿತವಿಜ್ಞಾನ ಸಹ ಪ್ರಾಧ್ಯಾಪಕ ಡಾ. ಬಿ.ಜೆ. ಗಿರೀಶ್ ಎಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯಗಳ ಕುರಿತ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇನ್ನು ಔದ್ಯೋಗಿಕ ರಾಸಾಯನಶಾಸ್ತ್ರ ವಿಭಾಗದ ಸಹ ಪ್ರಧ್ಯಾಪಕ ಡಾ. ಬಿ. ಇ. ಕುಮಾರಸ್ವಾಮಿ 16,5713ನೇ ಸ್ಥಾನದಲ್ಲಿದ್ದಾರೆ.
ಈ ವರ್ಷದ ಪಟ್ಟಿಯಲ್ಲಿ ಭಾರತದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸುಮಾರು 2,042 ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ 1,900 ವಿಜ್ಞಾನಿಗಳು ಸ್ಥಾನ ಪಡೆದಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISಛಿ.) 114 ವಿಜ್ಞಾನಿಗಳು ಈ ಪಟ್ಟಿಯಲ್ಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವಿವಿಯ ಸಂಶೋಧನಾ ಸಾಧನೆಗೆ ಪೂರಕವಾದ ಕಾರ್ಯ ಮಾಡುತ್ತಿರುವ ಈ ಇಬ್ಬರು ಅಧ್ಯಾಪಕರ ಸಾಧನೆಯು ಕುವೆಂಪು ವಿವಿಗೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಕುಲಸಚಿವೆ ಜಿ.ಅನುರಾಧಾ ತಿಳಿಸಿದ್ದಾರೆ.
https://www.suddikanaja.com/2021/10/02/assistant-professor-recruitment-in-karnataka/