ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಬರೋಬ್ಬರಿ 20 ತಿಂಗಳುಗಳ ಬಳಿಕ 1ರಿಂದ 5ನೇ ತರಗತಿಯ ಶಾಲೆಗಳು ಪುನರಾರಂಭವಾಗಲಿವೆ. ಅದಕ್ಕಾಗಿ ಶಿವಮೊಗ್ಗದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಕ್ಕಳನ್ನು ಶಾಲೆಗೆ ಸ್ವಾಗತಿಸುವುದೂ ಸೇರಿ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ.
ಕೋವಿಡ್ ನಿಂದಾಗಿ ಶಾಲೆಗಳ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ರಾಜ್ಯ ಸರ್ಕಾರ ಹಲವು ನಿಯಮಗಳಡಿ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ.
ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಯವರೆಗೆ ಒಟ್ಟು 2.57 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಬೆಳಗ್ಗೆ ಅವಧಿಯಲ್ಲಿ ತರಗತಿಗಳನ್ನು ನಡೆಸಲಾಗುವುದು. ಈಗಾಗಲೇ 6ರಿಂದ 10ನೇ ತರಗತಿಯವರ ತರಗತಿಗಳು ನಡೆಯುತ್ತಿದ್ದು, ಅವರಿಗೆ ಮಧ್ಯಾಹ್ನದ ಅವಧಿಯಲ್ಲೂ ಭೌತಿಕ ತರಗತಿಗಳು ಮುಂದುವರಿಯಲಿವೆ ಎಂದು ತಿಳಿಸಲಾಗಿದೆ.
- ಅಕ್ಟೋಬರ್ 25ರಿಂದ ನವೆಂಬರ್ 2ರ ವರೆಗೆ ಹಾಫ್ ಡೇ ಮಾತ್ರ ತರಗತಿಗೆ ಅವಕಾಶವಿದೆ. ತದನಂತರ, ಪೂರ್ತಿ ದಿನ ತರಗತಿ ನಡೆಸಬಹುದು.
- ಯಾವುದೇ ಶಾಲೆಗಳಲ್ಲೂ ಎಲ್ಕೆಜಿ, ಯುಕೆಜಿ ತರಗತಿಗಳನ್ನು ತೆರೆಯುವುದಕ್ಕೆ ಅವಕಾಶ ಇರುವುದಿಲ್ಲ.
- ಕೊರೊನಾ ಸೋಂಕಿನ ಕಾರಣದಿಂದಾಗಿ ತರಗತಿಯಲ್ಲಿ ಶೇ.50ರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು.
- ಮಕ್ಕಳು ಶಾಲೆಗೆ ಬರುವ ಮುನ್ನ ಪಾಲಕರು/ ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯ. ಅದರಲ್ಲಿ ಮಕ್ಕಳಿಗೆ ಸೋಂಕು ಇಲ್ಲದಿರುವ ವಿಚಾರವನ್ನೂ ದೃಢೀಕರಿಸಬೇಕು.
- ವಿದ್ಯಾರ್ಥಿಗಳಿಗೆ ಆನ್ಲೈನ್ ಹಾಗೂ ಆಫ್ಲೈನ್ ಎರಡೂ ತರಗತಿಗೂ ಅವಕಾಶವಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಇರುವುದಿಲ್ಲ.
- ಶಾಲೆಗಳ ಕೊಠಡಿಗಳನ್ನು ಸರಿಯಾಗಿ ಸ್ವಚ್ಚಗೊಳಿಸಿ ಸ್ಯಾನಿಟೈಸ್ ಮಾಡಬೇಕು. ವಿದ್ಯಾರ್ಥಿಗಳಿಗೆ ಕುಡಿಯುವುದಕ್ಕೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
- 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು. ಎರಡು ಡೋಸ್ ಪಡೆದ ಶಿಕ್ಷಕರು ಪಾಠ ಮಾಡಬಹುದು.
https://www.suddikanaja.com/2021/08/22/shivamogga-airport-work/