ಮಲೆನಾಡಿನಾದ್ಯಂತ ಸಡಗರದ ಭೂಮಿ ಹುಣ್ಣಿಮೆ

 

 

ಸುದ್ದಿ ಕಣಜ.ಕಾಂ | DISTRICT | FESTIVAL 
ಹೊಸನಗರ(ಶಿವಮೊಗ್ಗ): ಮಲೆನಾಡು ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ದಟ್ಟ ಕಾನು, ಕಾಡು, ಹಸಿರು ಪರಿಸರ, ಸದಾ ಜಿಟಿ ಮಳೆ, ಮುಗಿಲೆತ್ತರದ ಬೆಟ್ಟ, ಅಡಿಕೆ ಬೆಳೆ, ಬಾಗಿ ನಿಂತ ಬಾಳೆ, ಹಸಿರು ಕಂಬಳಿ ಹಾಸಿದಂತೆ ಕಣ್ಮನ ಸೆಳೆಯುವ ಕಾಫಿ….
ಮಲೆನಾಡು ನೋಡಲೆಷ್ಟು ಸುಂದರವೋ ಅಷ್ಟೇ ಇಲ್ಲಿನ ಆಚರಣೆಗಳೂ ವೈವಿಧ್ಯಮಯದಿಂದ ಕೂಡಿವೆ. ವಿಶಿಷ್ಟ ಸಂಪ್ರದಾಯಗಳ ಮೂಲಕ ಹೆಸರು ಮಾಡಿವೆ.

Bhoomi hunnime 1
ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯಂದು ಸಡಗರದ ಸಂಭ್ರಮದಿಂದ `ಭೂಮಣಿ ಹಬ್ಬ’ ಆಚರಿಸಲಾಗುತ್ತದೆ. ಹಸಿರಿನಿಂದ ಆವೃತವಾದ ಭೂರಮೆಯನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇದಾಗಿದೆ.
ರೈತಾಪಿ ವರ್ಗ ವರ್ಷವಿಡಿ ದುಡಿದು, ಬೆಳೆಯ ಬೆಳೆಯುವ ಭೂಮಿಯನ್ನು ತಾಯಿಯ ರೂಪದಲ್ಲಿ ಕಂಡು ಪೂಜಿಸುವ, ಆರಾಧಿಸುವ ಸುಸಂದರ್ಭ ಇದು. ಈ ಹಬ್ಬವನ್ನು ಭೂಮಿ ಹುಣ್ಣಿಮೆ, ಸೀಗೆ ಹುಣ್ಣಿಮೆ ಹೀಗೆ ನಾನಾ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಭೂಮಿ ತಾಯಿಯಲ್ಲಿ ಪ್ರಾರ್ಥನೆ
ಭೂಮಿ ತಾಯಿಯ ಬಯಕೆಗಳ ಭಾವನೆಗಳ ಬೆಳೆಗಳು ತೆನೆಗಳಾಗಿ ಬರುವ ಈ ದಿನ ಸುದಿನ, ಭೂಮಿ ತಾಯಿಯನ್ನು ಗರ್ಭಿಣಿಯಂತೆ ಭಾವಿಸಿ, ಪೂಜಿಸಿ ಸೀಮಂತ ಮಾಡುವ ಸಂಭ್ರಮ ರೈತರ ಪಾಲಿಗೆ ಖುಷಿಯ ಸಮ್ಮಿಲನ.
ಬೆಳೆವ ಭೂಮಿ ಫಲವತ್ತಾಗಿ ಬೆಳೆದು ಉತ್ತಮ ಫಸಲು ಕೈಗೆ ಲಭಿಸಲಿ ಎಂದು ಪ್ರಾರ್ಥನೆ ಮಾಡುವ ರೈತರಿಗೆ ಇದು ಸಂಭ್ರಮದ ಹಬ್ಬವೇ ಸರಿ. ಅದರಲ್ಲೂ ಮನೆಯ ಹೆಣ್ಣು ಮಕ್ಕಳು, ಮಡದಿ ತಾಯಂದಿರಿಗೆ ವಾರಪೂರ್ತಿ ಭೂಮಿ ಹುಣ್ಣಿಮೆ ಹಬ್ಬದ ಪೂರ್ವ ತಯಾರಿಯೇ ವಿಶೇಷ.

ಆಚರಣೆಯ ಪದ್ಧತಿ ಹೇಗೆ?

ಭೂಮಿ ಹುಣ್ಣಿಮೆ ದಿನ ಮನೆಯ ಸುತ್ತ ಮುತ್ತ ಸಿಗುವ ತರಕಾರಿ, ಸೊಪ್ಪುಗಳನ್ನು ಬಳಸಿ ಭೂಮಿತಾಯಿಗೆ ನೈವೇದ್ಯ ರೂಪದಲ್ಲಿ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಅದನ್ನು ಹೊಲ ಗದ್ದೆಗೆ ಕೊಂಡೊಯ್ಯಲು ವಿಶೇಷವಾದ ಭೂಮಣಿ ಬುಟ್ಟಿ (ಕುಕ್ಕೆ ) ಗೆ ವಿಶಿಷ್ಟ ಅಲಂಕಾರ, ಬಗೆ ಬಗೆಯ ಚಿತ್ತಾರಗಳನ್ನು ಬುಟ್ಟಿಯ ಮೇಲೆ ಬರೆಯಲಾಗುತ್ತದೆ. ಅದನ್ನು ವಿಜಯದಶಮಿ ದಿನ ಅಟ್ಟದ ಮೇಲಿಂದ ಇಳಿದ ಬುಟ್ಟಿಗಳಿಗೆ, ಸೆಗಣಿ, ಜೇಡಿಮಣ್ಣು, ಕೆಮ್ಮಣ್ಣು ಬಳಿದು ಮನೆಯಲ್ಲಿ ತಯಾರಿ ಮಾಡಿದ ಕಪ್ಪು ಬಣ್ಣದಿಂದ ಬುಟ್ಟಿಗಳಿಗೆ ಚಿತ್ತಾರ ಮೂಡಿಸುವ ಕಲೆಯೇ ವಿಶಿಷ್ಟ.
ಈ ಬುಟ್ಟಿಗಳನ್ನು ಮನೆಯ ಹಿರಿಯ, ಯಜಮಾನರು ತಮ್ಮ ತಲೆಯ ಮೇಲೆ ಇಟ್ಟು ಗದ್ದೆಗಳಿಗೆ ಕುಟುಂಬದವರೊಂದಿಗೆ ತೆಗೆದುಕೊಂಡು ಹೋಗಲಾಗುತ್ತದೆ.

READ | ಪದವೀಧರರಿಗೆ ಉದ್ಯೋಗ ಅವಕಾಶ, 4,135 ಹುದ್ದೆಗಳಿಗೆ ನೇಮಕಾತಿ

ನಸುಕಿನಲ್ಲೇ ಬೆಳೆಗಳಿಗೆ ಪೂಜೆ, ತಳಿರು ತೋರಣ
ಹೀಗೆ ಬಗೆ-ಬಗೆಯ ಖಾದ್ಯ, ಪೂಜಾ ಸಾಮಗ್ರಿಗಳನ್ನು ಬುಟ್ಟಿಯಲ್ಲಿ ಹೊತ್ತು ತಂದು ಸೂರ್ಯೋದಯ ಮುಂಚಿತವಾಗಿ ನಸುಕಿನ ಜಾವ ರೈತರು ತಾವು ಬೆಳೆದ ಭತ್ತ, ಅಡಿಕೆ, ಬಾಳೆ ಬೆಳೆಗಳನ್ನು ಮಾವಿನ ತಳಿರು- ತೋರಣಗಳನ್ನ ಕಟ್ಟಿ ಶೃಂಗಾರ ಮಾಡುತ್ತಾರೆ.
ಮನೆಯ ಹೆಣ್ಣು ಮಕ್ಕಳು ವಿಶೇಷವಾಗಿ ತಮ್ಮ ಮಾಂಗಲ್ಯ ಸರವನ್ನು ಭತ್ತದ ಪೈರಿಗೆ ಜೋಡಿಸಿ, ಮನೆಯಿಂದ ತಂದ ನಂದಾದೀಪವನ್ನು ಬೆಳಗಲಾಗುತ್ತದೆ. ಕೈಗೆ ಬಂದ ಬೆಳೆಗೆ ಯಾವುದೇ ವಿಘ್ನಗಳಿಲ್ಲದೆ ಉತ್ತಮ ಪಸಲು ಲಭಿಸಲಿ ಎಂದು ಪ್ರಾರ್ಥನೆ ಮಾಡಲಾಗುತ್ತದೆ.
ಭೂಮಿ ಹುಣ್ಣಿಮೆಯ ವಿಶೇಷ ಖಾದ್ಯ ಕೊಟ್ಟೆ ಕಡಬು, ಹೋಳಿಗೆಗಳನ್ನ ಭೂಮಿತಾಯಿಗೆ ನೈವೇದ್ಯ ಮಾಡಿ, ಒಂದು ಕಡುಬಿನ ತುಂಡನ್ನ ಪೂಜೆ ಮಾಡಿದ ಜಾಗದಲ್ಲಿ ಮಣ್ಣಿನಲ್ಲಿ ಇಡಲಾಗತ್ತದೆ. ಬೆಳೆದ ಪೈರು ಕಟಾವು (ಕೊಯ್ಲು) ಆದ ನಂತರ ಬಣವೆಯ ತಲೆ ಮೇಲೆ ಅಂದು ಭೂಮಿಯಲ್ಲಿ ಹುದುಗಿಸಿದ್ದ ಕಡಬಿನ ತುಣುಕು ತಂದು ಇಡುವುದು ವಾಡಿಕೆ. ಇವೆಲ್ಲ ಭೂಮಿ ಹುಣ್ಣಿಮೆಯ ವೈಶಿಷ್ಟ್ಯ
ಬರಹ | ಅಜಿತ್ ಗೌಡ ಬಡೇನಕೊಪ್ಪ

https://www.suddikanaja.com/2021/07/03/accused-arrested-5/

error: Content is protected !!