`ಅಡುಗೂಳಜ್ಜಿ’ ರಾಜರ ಕಾಲದ ಸ್ಪೈ ಎಂದರೂ ತಪ್ಪಾಗದು, ಈ ಪದ ಹುಟ್ಟಿದ್ದು ಹೇಗೆ, ನೈಜವಾಗಿ ಇವರಿದ್ದರಾ?

ಸುದ್ದಿ ಕಣಜ.ಕಾಂ | KARNATAKA | PADA KANAJA
ಅಡುಗೂಳಜ್ಜಿ ಇದು ಸರಿಯಾದ ರೂಪ. ಜನರ ಮಾತಿನಲ್ಲಿ ಅದು `ಅಡುಗೂಲಜ್ಜಿ’ ಆಗಿದೆ. ಅಡು=ಅಡುಗೆ ಮಾಡು, ಕೂಳು= ಅನ್ನ+ ಅಜ್ಜಿ=ಮುದುಕಿ. ಕೂಳು ಎನ್ನುವುದು ಹಳೆಗನ್ನಡದ ಕೂಯಿ ಎಂಬುದರಿಂದ ಬಂದಿದೆ. ಅನ್ನವನ್ನು ಅಡುಗೆ ಮಾಡಿ ಬಡಿಸುವ ಮುದುಕಿ. ಹಿಂದಿನ ಕಾಲದಲ್ಲಿ ಎಲ್ಲ ಊರುಗಳಲ್ಲಿ ಎಂತಹ ಮುದುಕಿಯರು ತಾವೇ ಸಂಪಾದನೆ ಮಾಡಿ ಜೀವನವನ್ನು ನಡೆಸುತ್ತಿದ್ದರು. ಇವರ ಮನೆಗೆ ಬಂದವರು ಆಡುವ ಮಾತುಗಳನ್ನೆಲ್ಲ ಕೇಳಿ ಮುದುಕಿ ಸಮಾಚಾರಗಳನ್ನು ಹರಡುತ್ತಿದ್ದಳು. ಅವಳು ಕಟ್ಟಿ ಹೇಳುತ್ತಿದ್ದ ಕಥೆಗಳೇ ಅಡುಗೂಳಜ್ಜಿ ಕಥೆಗಳು. ಅಂದರೆ ಇಂತಹ ಅಡುಗೂಳಜ್ಜಿಗಳಿಗೆ ವರ್ತಮಾನಗಳಿಗೆ ಕೈಕಾಲುಗಳನ್ನು ಕಟ್ಟಿ ಕಥೆ ಹೇಳುವ ಜಾಣತನವೂ ಇತ್ತು ಎಂದರ್ಥ.

ಎಷ್ಟೋ ವೇಳೆ ಕಾಲಹರಣ ಮಾಡಲು ಇಂತಹ ಅಜ್ಜಿಯ ಮನೆಗೆ ವಿಚಿತ್ರ ವರ್ತಮಾನಗಳಲ್ಲಿ ಆಸಕ್ತಿ ಇರುವವರು ಬರುತ್ತಿದ್ದರು.
ಇವರ ಸಹಾಯದಿಂದ ಕಥೆಗಳು ಬೆಳೆಯುತ್ತಿದ್ದವು. ಅವಳ ವ್ಯಾಪಾರವೂ ಕುದುರುತಿತ್ತು. ಕೆಲವು ವೇಳೆ ರಾಜರು ವೇಷಾಂತರವನ್ನು ಧರಿಸಿ ಅಡುಗೂಳಜ್ಜಿಗಳ ಮನೆಗೆ ಬರುತ್ತಿದ್ದರು ಎಂಬ ಕಥೆಗಳಿವೆ. ಹಾಗೆಯೇ ರಾಜನ ಅಧಿಕಾರಿಗಳು ಕಳ್ಳರನ್ನು ಹಿಡಿಯುತ್ತಿದ್ದರಂತೆ.
ಹೀಗೆ ಇಂತಹ ಸಮರ್ಥ ಕಥೆಗಾರರಾದ ಅಡುಗೂಳಜ್ಜಿಗಳ ಸಹಾಯದಿಂದಲೇ ನಮ್ಮ ರಾಕ್ಷಸರ ಕಥೆಗಳು, ಮಂತ್ರವಾದಿಗಳ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು ಮುಂತಾದವೆಲ್ಲ ಹುಟ್ಟಿ ಬೆಳೆದು ನಿಂತಿವೆ ಎನ್ನಲಾಗುತ್ತದೆ.