ಶಾಲೆ, ಕಾಲೇಜು ಆರಂಭವಾಗಿ ತಿಂಗಳುಗಳೇ ಕಳೆದರೂ ಬಸ್ಸು ಇಲ್ಲ, ಸ್ಕಾಲರ್‍ಶಿಪ್ ಇಲ್ಲ, ಎಬಿವಿಪಿ ಗರಂ

 

 

ಸುದ್ದಿ ಕಣಜ.ಕಾಂ | CITY | ABVP PROTEST
ಶಿವಮೊಗ್ಗ: ಶಾಲೆ, ಕಾಲೇಜುಗಳು ಆರಂಭಗೊಂಡು ಮೂರು ತಿಂಗಳಿಗಿಂತ ಅಧಿಕವಾಗಿದೆ. ಆದರೆ, ಇದುವರೆಗೆ ಹಲವೆಡೆ ಬಸ್ ಸೌಲಭ್ಯವೇ ಇಲ್ಲ. ಜೊತೆಗೆ, ಸ್ಕಾಲರ್ ಶಿಪ್ ಕೂಡ ಲಭಿಸಿಲ್ಲ ಎಂದು ಎಬಿವಿಪಿ ಆರೋಪಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ಮಾಡಿದ ಎಬಿವಿಪಿ ಕಾರ್ಯಕರ್ತರು, ಕೂಡಲೇ ವಿದ್ಯಾರ್ಥಿಗಳ ಸಂಕಷ್ಟಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೋವಿಡ್ ಎರಡನೇ ಲಾಕ್ ಡೌನ್ ಬಳಿಕ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲಾಗಿದೆ. ಶೈಕ್ಷಣಿಕ ಚಟುವಟಿಕೆಗಳೂ ಶುರುವಾಗಿವೆ. ಆದರೆ, ಸರ್ಕಾರ ಕಾಲೇಜು ವಿದ್ಯಾರ್ಥಿಗಳಿಗೆ ಎಸ್.ಎಸ್.ಪಿ. ಸ್ಕಾಲರ್ ಶಿಪ್ ಅಡಿಯಲ್ಲಿ ನೀಡುವ ವಿದ್ಯಾರ್ಥಿ ವೇತನ ಇದುವರೆಗೆ ಸಮರ್ಪಕವಾಗಿ ನೀಡಿಲ್ಲ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಂಸ್ಥೆಯಿಂದ ಹಾಸ್ಟೆಲ್ ಗಳಿಗೆ ಹೋಗುವುದಕ್ಕೆ ಆ ಮಾರ್ಗದಲ್ಲಿ ಬಸ್ ಗಳನ್ನೇ ಬಿಟ್ಟಿಲ್ಲ. ಇದರಿಂದಾಗಿಯೂ ತೊಂದರೆ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಡಿಸಿ ಕಚೇರಿ ಎದುರು ಸಂಚಾರ ದಟ್ಟಣೆ

ಎಬಿವಿಪಿ ಕಾರ್ಯಕಾರ್ತರು ಖುದ್ದು ಡಿಸಿಗಳೇ ಬಂದು ಮನವಿ ಸ್ವೀಕರಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರಸ್ತೆ ತಡೆ ನಡೆಸಿದ್ದರು. ಪರಿಣಾಮ ಒಂದು ಗಂಟೆಗೂ ಅಧಿಕ ಸಮಯ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ವಿಜಯ್ ಗೌಡರ್ ಸೇರಿದಂತೆ ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು.

https://www.suddikanaja.com/2021/03/04/abvp-protest-for-restart-bus-facility-in-shivamogga/

error: Content is protected !!