ಸುದ್ದಿ ಕಣಜ.ಕಾಂ | DISTRICT | MESCOM
ಶಿವಮೊಗ್ಗ: ಜಿಲ್ಲೆಯ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಅನುಷ್ಠಾನದಲ್ಲಿ ಲೋಪದೋಷಗಳು ಕಂಡು ಬಂದ ಹಿನ್ನೆಲೆ ತಪ್ಪಿತಸ್ಥರನ್ನು ತಕ್ಷಣ ಅಮಾನತುಗೊಳಿಸಿ, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಇಂಧನ ಖಾತೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನೆ ಅನುಷ್ಠಾನದಲ್ಲಿನ ಲೋಪದೋಷಗಳ ಬಗ್ಗೆ ಹಿರಿಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನಿರಂತರ ಜ್ಯೋತಿ ಯೋಜನೆ ಫೀಡರ್ ಗಳ ಅಳವಡಿಕೆ ಸಮರ್ಪಕವಾಗಿ ಆಗಿಲ್ಲ. 224 ಕೋಟಿ ರೂಪಾಯಿ ಮೊತ್ತದ ಈ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ. ವಿದ್ಯುತ್ ಕಂಬಗಳನ್ನು ನಿಗದಿತ ಆಳದಲ್ಲಿ ಅಳವಡಿಸದಿರುವುದು, ಸಮರ್ಪಕ ಅರ್ಥಿಂಗ್ ಮಾಡದಿರುವುದು, ಕಾರ್ಮಿಕ ಕಾಯ್ದೆಗಳನ್ನು ಸರಿಯಾಗಿ ಪಾಲನೆ ಮಾಡದಿರುವುದು ಸೇರಿದಂತೆ ವಿವಿಧ ಹಂತಗಳಲ್ಲಿ ಲೋಪದೊಷಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಯೋಜನೆ ಅನುಷ್ಠಾನದ ಕುರಿತು ಸಮಗ್ರ ತನಿಖೆಯನ್ನು ಎಸಿಬಿ ವತಿಯಿಂದ ಅಥವಾ ಇಲಾಖಾ ತನಿಖೆ ನಡೆಸುವ ಕುರಿತು ಪ್ರಧಾನ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಕೆ.ಬಿ.ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೆಸ್ಕಾಂ ಎಂ.ಡಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2021/04/20/niraantara-jyothi-instruction-to-cover-amount-from-contractors/