ಗಾಜನೂರು ಬಳಿ ತುಂಗಾ ಎಡ ನಾಲೆಗೆ ಬಿದ್ದ ಕಾರು, ಸಹಾಯಕ್ಕಾಗಿ ಕಿರುಚಿದರೂ ಆಗಲಿಲ್ಲ ಪ್ರಯೋಜನ

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಗಾಜನೂರು ಬಳಿ ತುಂಗಾ ನದಿಯ ಎಡ ನಾಲೆಗೆ ಕಾರೊಂದು ಬಿದ್ದು ಮಹಿಳೆ ಮೃತಪಟ್ಟಿದ್ದಾರೆ. ಅದೃಷ್ಟವಷಾತ್ ಆಕೆಯ ಗಂಡನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಸುಷ್ಮಾ(28) ಎಂಬುವವರು ಮೃತಪಟ್ಟಿದ್ದು, ಇವರ ಪತಿ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಕೆಲಸ ಮಾಡುತ್ತಿರುವ ಚೇತನ್ ಕುಮಾರ್(32) ಅವರನ್ನು ರಕ್ಷಿಸಲಾಗಿದೆ. ಗುರುವಾರ ಬೆಳಗಿನ ಜಾವ ತುಮಕೂರಿಗೆ ಹೋಗುವಾಗ ಘಟನೆ ನಡೆದಿದೆ.
ತಾಯಿಯ ಅನಾರೋಗ್ಯ ಸುದ್ದಿ ಕೇಳಿ ತುಮಕೂರಿಗೆ ಹೋಗುತ್ತಿದ್ದ ಚೇತನ್
ಗಾಜನೂರು ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಕೆಲಸ ಮಾಡುತ್ತಿರುವ ಚೇತನ್ ಕುಮಾರ್ ಅವರಿಗೆ ತುಮಕೂರಿನಲ್ಲಿರುವ ಅವರ ತಾಯಿಯ ಅನಾರೋಗ್ಯದ ವಿಚಾರ ತಿಳಿದ ಕೂಡಲೇ ತನ್ನ ಹೆಂಡತಿ ಸುಷ್ಮಾ ಅವರೊಂದಿಗೆ ಕಾರಿನಲ್ಲಿ ತುಮಕೂರಿಗೆ ಹೊರಟಿದ್ದಾರೆ.

READ | ಮಾಡರ್ನ್ ಟಾಕೀಸ್ ಬಳಿ ಭಾರೀ ಅಗ್ನಿ ಅವಘಡ

ಚೇತನ್ ಕುಮಾರ್ ವಾಹನವನ್ನು ಅತೀ ವೇಗದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಗಾಜನೂರಿನ ಬಳಿ ತುಂಗಾನದಿ ಎಡದಂಡೆ ನಾಲೆಯ ಪಕ್ಕದಲ್ಲಿರುವ ಟಾರ್ ರಸ್ತೆಯಲ್ಲಿ ಕಾರಿಗೆ ಅಡ್ಡಲಾಗಿ ರಸ್ತೆಯಲ್ಲಿ ಹಾವು ಬಂದಿದೆ. ಅದನ್ನು ತಪ್ಪಿಸಲು ಹೋಗಿ ಏಕಾಏಕಿ ಬ್ರೇಕ್ ಹಾಕಿದ್ದು ಪರಿಣಾಮವಾಗಿ ಕಾರು ಎಡದಂಡೆ ನಾಲೆಯ ನೀರಿಗೆ ಹೋಗಿ ಬಿದ್ದಿದೆ.
ಆ ಸಂದರ್ಭದಲ್ಲಿ ಚೇತನ್ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆದರೆ, ರಾತ್ರಿಯ ಸಮಯವಾಗಿದ್ದರಿಂದ ಅಕ್ಕ ಪಕ್ಕದಲ್ಲಿ ಯಾರೂ ಇಲ್ಲದ ಕಾರಣ ತಕ್ಷಣ ಇವರ ಸಹಾಯಕ್ಕೆ ಯಾರೂ ಬರಲು ಸಾಧ್ಯವಾಗಿಲ್ಲ. ಸುಮಾರು 1 ಗಂಟೆಗಳ ನಂತರ ಗಾಜನೂರಿನ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಸಹಾಯ ಮಾಡುವಷ್ಟರಲ್ಲಿ ಸುಷ್ಮಾ ಅವರು ನಾಲೆಯ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾರೆ. ಸುಷ್ಮಾ ಅವರ ಮೃತದೇಹ ಹಾಗೂ ಸುರಕ್ಷಿತವಾಗಿ ಚೇತನ್ ಕುಮಾರ್ ಅವರನ್ನು ದಡಕ್ಕೆ ತರಲಾಗಿರುತ್ತದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರಿ ನೌಕರರಿಗೆ ಒಂದು ಗಂಟೆಯೊಳಗೆ 5 ಲಕ್ಷ ರೂ.ವರೆಗೆ ಸಾಲ