ಸುದ್ದಿ ಕಣಜ.ಕಾಂ | CITY | SMART CITY
ಶಿವಮೊಗ್ಗ: ವ್ಯಕ್ತಿಯೊಬ್ಬರು ಜನವರಿ 27ರಂದು ಮಧ್ಯಾಹ್ನ ಗುಂಡಿಯೊಂದರಲ್ಲಿ ಬಿದ್ದು ಕಾಲು ಮುರಿದುಕೊಂಡಿರುವ ಪ್ರಕರಣದ ಬಗ್ಗೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್ ಎಸ್. ವಟಾರೆ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಅದರಲ್ಲಿ ಆ ಗುಂಡಿ ಸ್ಮಾರ್ಟ್ ಸಿಟಿಯದ್ದಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
READ | ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ವ್ಯಕ್ತಿ, ಎಫ್.ಐ.ಆರ್ ದಾಖಲು
ಸ್ಮಾರ್ಟ್ ಸಿಟಿ ಎಂಡಿ ನೀಡಿರುವ ಸ್ಪಷ್ಟನೆಯಲ್ಲಿ ಏನಿದೆ?
‘ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ಜನವರಿ 27ರಂದು ಮಧ್ಯಾಹ್ನ ಶಿವಮೊಗ್ಗ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಯೊಬ್ಬರು ಬಿದ್ದು ಗಾಯಗೊಂಡಿರುವುದಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಕಾರಣವಾಗಿರುವುದಿಲ್ಲ.’
ಅದು ಖಾಸಗಿ ಕಂಪನಿಯೊಬ್ಬರು ತೋಡಿರುವ ಗುಂಡಿಯಾಗಿದೆ. ಅದನ್ನು ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ಅನುವಾಗುವಂತೆ ಹಾರಿಜಾಂಟಲ್ ಡೈರೆಕ್ಷನ್ ಡ್ರಿಲ್ಲಿಂಗ್ ಗಾಗಿ ತೋಡಲಾಗಿದೆ ಎಂದು ತಿಳಿಸಿದ್ದಾರೆ.
ಸದರಿ ಕಂಪನಿಯವರಿಗೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯಾಪ್ತಿ ಪ್ರದೇಶದಲ್ಲಿ ಎಚ್.ಡಿ.ಡಿ. ಮಾಡದಂತೆ ಹಾಗೂ ಸ್ಮಾರ್ಟ್ ಸಿಟಿಯ ವತಿಯಿಂದ ಈಗಾಗಲೇ ಅಳವಡಿಸಿರುವ 7ವೇ ಮಲ್ಟಿಡಕ್ಟ್ ಮುಖಾಂತರವೇ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವಂತೆ 2021ರ ಡಿಸೆಂಬರ್ 27ರಂದು ನೋಂದಾಯಿತ ಅಂಚೆಯ ಪತ್ರದ ಮೂಲಕ ತಿಳಿವಳಿಕೆ ನೀಡಲಾಗಿದೆ. ಈ ಕಂಪೆನಿಯ ಪ್ರತಿನಿಧಿಗಳಿಗೂ ಮುಖತಃ ಹಾಗೂ ದೂರವಾಣಿ ಮೂಲಕ ಹಲವು ಬಾರಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
READ | ಬೊಮ್ಮನಕಟ್ಟೆಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲು ತೋರಾಟ, ಕಾರಿನ ಹಿಂಭಾಗ ಪೀಸ್ ಪೀಸ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ಯಾವುದೇ ಪಾತ್ರ ಇರುವುದಿಲ್ಲ. ಬದಲಿಗೆ ಯಾವುದೇ ಆಕಸ್ಮಿಕಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದಾಗ್ಯೂ ನೀಡಿದ ಸೂಚನೆಯನ್ನು ಮೀರಿ ಯಾರಿಗೂ ತಿಳಿಯದಂತೆ ತಡರಾತ್ರಿ ವೇಳೆಯಲ್ಲಿ ಗುಂಡಿ ತೆಗೆದು ಅಪಘಾತಕ್ಕೆ ಕಾರಣರಾದ ಕಂಪನಿಯ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಈ ಕಚೇರಿ ವತಿಯಿಂದ ಪೊಲೀಸ್ ಅಧಿಕಾರಿಗಳನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಯಾವುದೇ ಆಕಸ್ಮಿಕಗಳು ನಡೆದಲ್ಲಿ ಮೂಲ ಕಾರಣವನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪಡೆಯದೇ ನೇರವಾಗಿ ಸ್ಮಾರ್ಟ್ ಸಿಟಿಯ ಮೇಲೆ ಅನಗತ್ಯ ಆಪಾದನೆ ಹೊರಿಸಿ ವರದಿ ಪ್ರಕಟಿಸುವುದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಆದ್ದರಿಂದ, ಸ್ಟಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಯಾವುದೇ ಆಕಸ್ಮಿಕಗಳು ನಡೆದಾಗ ಘಟನೆಗೆ ಕಾರಣವನ್ನು ತಿಳಿದುಕೊಂಡು ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ಮಾಡುವಂತೆ ವಟಾರೆ ವಿನಂತಿಸಿಕೊಂಡಿದ್ದಾರೆ.
JOBS IN SHIVAMOGGA ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗ ಅವಕಾಶ, ಇಂದೇ ಅರ್ಜಿ ಸಲ್ಲಿಸಿ