ಹಸುಗಳಲ್ಲಿಯೇ ಅತೀ ಹೆಚ್ಚು ವರ್ಷ ಬದುಕಿದ ಮಲೆನಾಡು ಗಿಡ್ಡ ತಳಿಯ ಕೌಲೆ ಇನ್ನಿಲ್ಲ!

ಸುದ್ದಿ ಕಣಜ.ಕಾಂ | KARNATAKA | MALNAD GIDDA
ಸಾಗರ: ಹಸುಗಳ ಸರಾಸರಿ ವಯಸ್ಸು 15-25 ವರ್ಷ. ಆದರೆ, ತಾಲೂಕಿನ ತಾಳಗುಪ್ಪ (Talaguppa) ಸಮೀಪದ ಮುಸುವಳ್ಳಿ ಗ್ರಾಮದ ಕೌಲೆ (Kaule) ಬದುಕಿದ್ದು ಬರೋಬ್ಬರಿ 36 ವರ್ಷ. ಹೀಗಾಗಿ, ಇದನ್ನು ಅತಿ ಹೆಚ್ಚು ವರ್ಷಗಳ ಕಾಲ ಬದುಕಿದ ಹಸು ಎನ್ನಲಾಗುತ್ತಿದೆ.
ಮುಸುವಳ್ಳಿಯ ನಾರಾಯಣ ಭಟ್ಟ ಎಂಬುವವರಿಗೆ ಸೇರಿದ ಮಲೆನಾಡು ಗಿಡ್ಡ( malnad gidda)ದ ಕಪಿಲ ತಳಿ(kapila breed) ಯ ಕೌಲೆ ಸೋಮವಾರ ಮೃತಪಟ್ಟಿದೆ. ಇದೇ ಭಟ್ಟರ ಮನೆಯಲ್ಲಿ ಹಳ್ಳಿಕಾರ್ ತಳಿಯ ಹಸುವೊಂದು 32 ವರ್ಷ ಬದುಕಿ ಆರು ತಿಂಗಳುಗಳ ಹಿಂದಷ್ಟೇ ಇಹಲೋಕ ತ್ಯಜಿಸಿದೆ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಮಿಶ್ರ ತಳಿಯ ಹಸುಗಳು 15-20 ವರ್ಷ ಜೀವಿತಾವಧಿಯನ್ನು ಹೊಂದಿದರೆ, ದೇಶಿ ತಳಿಗಳು 20-25 ವರ್ಷಗಳ ಕಾಲ ಬದುಕುತ್ತವೆ. ಆದರೆ, ವಿಶೇಷ ಸ್ಥಾನಮಾನ ಹೊಂದಿರುವ ಮಲೆನಾಡು ಗಿಡ್ಡ ತಳಿಯ ಹಸು ಕೌಲೆ ಸುದೀರ್ಘ ಬದುಕಿ ದಾಖಲೆ ಸೃಷ್ಟಿಸಿದೆ.
ಮಲೆನಾಡು ಗಿಡ್ಡ ತಳಿಯದ್ದೇನು ವಿಶೇಷ
ಹರಿಯಾಣದ ಕರ್ನಾಲ್ ನಲ್ಲಿರುವ ರಾಷ್ಟ್ರೀಯ ಪಶು ಆನುವಂಶೀಯ ಮತ್ತು ತಳಿವಿಜ್ಞಾನ ಸಂಸ್ಥೆ ಮಲೆನಾಡು ಗಿಡ್ಡಕ್ಕೆ ನಿರ್ದಿಷ್ಟ ತಳಿಯ (ಭಾರತೀಯ ಜಾನುವಾರು 0800 ಮಲೆನಾಡು ಗಿಡ್ಡ 03037) ಮಾನ್ಯತೆ ನೀಡಿದೆ. ಇನ್ನುಳಿದ ತಳಿಗಳಿಗೆ ಹೋಲಿಸಿದರೆ ಇದರ ಡಿಎನ್.ಎ ಹಾಗೂ ವಂಶವಾಹಿಗಳು ಭಿನ್ನವಾಗಿವೆ. ಹಾಲಿನಲ್ಲಿ ಎ-2 ಕೆಸಿನ್ ಅಧಿಕವಾಗಿದೆ.

https://www.suddikanaja.com/2021/09/20/raise-in-temperature-humidity-in-malenadu/