ಹರ್ಷ ಕೊಲೆ ಪ್ರಕರಣ ತನಿಖೆ ಇನ್ನಷ್ಟು ಟೈಟ್, ‘ಯುಎಪಿಎ’ ಕಾಯ್ದೆ ಎಂಟ್ರಿ, ಏನಿದು ಕಾಯ್ದೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಸುದ್ದಿ ಕಣಜ.ಕಾಂ | KARNATAKA | SPECIAL STORY
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷ (28) ಕೊಲೆ ಪ್ರಕರಣದ ತನಿಖೆ ಮತ್ತಷ್ಟು ಗಂಭೀರವಾಗಲಿದೆ. ಇದಕ್ಕೆ ಕಾರಣ ತನಿಖೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ (ನಿರ್ಬಂಧ) ತಿದ್ದುಪಡಿ ಕಾಯ್ದೆ (ಯುಎಪಿಎ) ಅಳವಡಿಸಲಾಗಿದೆ.
ಪ್ರಕರಣದಲ್ಲಿ ಇದುವರೆಗೆ ಒಟ್ಟು 10 ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು 11 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗಿದ್ದು, ಸೋಮವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

READ | ಚಿಪ್ಪು ಹಂದಿಗೆ ಪಶ್ಚಿಮಘಟ್ಟದಲ್ಲಿ ಬೇಕಿದೆ ರಕ್ಷಣೆ, ಪ್ರಕೃತಿಯಲ್ಲಿ ಏನಿದ ವಿಶೇಷ, ಕಾನೂನಿನಲ್ಲಿ ಯಾವ ಸ್ಥಾನ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಏನಿದು ಯುಎಪಿಎ ಕಾಯ್ದೆ?
2019ರಲ್ಲಿ ಯುಎಪಿಎ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ವ್ಯಕ್ತಿಗಳನ್ನೂ ‘ಭಯೋತ್ಪಾದಕ’ ಎಂದು ಪರಿಗಣಿಸುವ ಹೊಸ ನಿಯಮವನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಪ್ರಕರಣದ ತನಿಖೆಯಲ್ಲಿ ಈ ಕಾಯ್ದೆ ಅಳವಡಿಸಿದರೆ, ಯುಎಪಿಎ ಕಾಯ್ದೆಯು ಕ್ರಿಮಿನಲ್ ಪ್ರೊಸೀಜರ್ ಕೋಡ್ ನಿಯಮಗಳಲ್ಲಿ ಮಾರ್ಪಾಡು ಮಾಡುವ ಅವಕಾಶ ಹೊಂದಿದೆ. ಸಾಮಾನ್ಯವಾಗಿ 15 ದಿನಗಳ ಬಂಧನದ ಅವಕಾಶವಿರುವುದನ್ನು 30 ದಿನಗಳಿಗೆ ವಿಸ್ತರಿಸಲಾಗಿದೆ. ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ನ್ಯಾಯಾಂಗ ಬಂಧನದ ಗರಿಷ್ಠ ಅವಧಿಯನ್ನು 90ರಿಂದ 180 ದಿನಗಳವರೆಗೆ ವಿಸ್ತರಿಸಲಾಗಿದೆ.
ಯುಎಪಿಎ ಕಾಯ್ದೆಯ 43ಡಿ(5)ರಡಿ ನ್ಯಾಯಾಲಯದ ದೃಷ್ಟಿಯಲ್ಲಿ ಆರೋಪಿಗಳ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡರೆ ಜಾಮೀನು ನಿರಾಕರಿಸಲು ಅವಕಾಶವಿದೆ. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪುವೊಂದರಲ್ಲಿ ಜಾಮೀನು ವಿಚಾರಣೆ ವೇಳೆ ಗಂಭೀರವಾದ ವಿಚಾರಣೆಯ ಅಗತ್ಯವಿಲ್ಲ ಎಂದು ಅಭಿಪ್ರಾಯ ನೀಡಿದೆ. ಇದೇ ಕಾರಣಕ್ಕಾಗಿ ಕಾಯ್ದೆಯ ಕುರಿತು ಭಾರಿ ಚರ್ಚೆಗಳು ನಡೆದಿದ್ದವು. ಇವೆಲ್ಲವುಗಳ ನಡುವೆಯೂ ತಿದ್ದುಪಡಿ ಮಾಡುವ ಮೂಲಕ ಕೇಂದ್ರದ ಉಭಯ ಸದನಗಳಲ್ಲಿ ಅನುಮೋದನೆ ನೀಡಲಾಗಿತ್ತು.

READ | ಎಸ್ಸೆಸ್ಸೆಲ್ಸಿನಲ್ಲಿ ಪಾಸಾಗಿದ್ದರೆ ಸಾಕು, ಬಿಎಂಟಿಸಿನಲ್ಲಿ ಉದ್ಯೋಗ, 300 ಹುದ್ದೆಗಳ ನೇಮಕಾತಿ

ತಿದ್ದುಪಡಿ ಮಾಡಿದ್ದೇಕೆ?
ವ್ಯಕ್ತಿ ಅಥವಾ ಗುಂಪು ದೇಶದ ಸಾರ್ವಭೌಮತೆ, ಭೌಗೋಳಿಕ ಅಖಂಡತೆಯನ್ನು ಪ್ರಶ್ನಿಸಿದರೆ ಅಂತಹವರನ್ನು ಕಾನೂನು ಬಾಹಿರ ಎಂದು ಪರಿಗಣಿಸಲು ಯುಎಪಿಎ ಕಾಯ್ದೆಯಲ್ಲಿ ಅವಕಾಶವಿದೆ. ವ್ಯಕ್ತಿ, ಗುಂಪನ್ನು ಕ್ರಿಮಿನಲ್ ಕಾನೂನು (ತಿದ್ದುಪಡಿ) 1952 ಕಾಯ್ದೆ ಅನ್ವಯ ಕಾನೂನು ಬಾಹಿರ ಎಂದು ಘೋಷಿಸಲಾಗುತಿತ್ತು. ಆದರೆ, ನಿಷೇಧ ಹೇರುವ ಔಚಿತ್ಯವನ್ನು ಪರಿಶೀಲಿಸಲು ನ್ಯಾಯಾಂಗದ ಯಾವ ಸಾಧನವೂ ಇರಲಿಲ್ಲ. ಹೀಗಾಗಿ, ನಿಷೇಧದ ಕುರಿತು ಪ್ರಶ್ನಿಸಿತ್ತು. 2004, 2013ರಲ್ಲಿ ಮಾಡಲಾದ ತಿದ್ದುಪಡಿಯಿಂದಾಗಿ ಕಾನೂನು ಮತ್ತಷ್ಟು ಬಿಗಿಯಾಗುವ ಮೂಲಕ ಕಾನೂನು ಬಾಹಿರ ಎಂದು ಘೋಷಿಸುವ ಅವಕಾಶ ನೀಡಲಾಯಿತು. ಆದರೆ, 2019ರಲ್ಲಿ ಮಾಡಿದ ತಿದ್ದುಪಡಿಯಲ್ಲಿ ಭಯೋತ್ಪಾದಕ ಎನ್ನುವುದನ್ನು ಸೇರ್ಪಡೆ ಮಾಡಲಾಗಿದೆ. ಈಗ ಹರ್ಷನ ಕೊಲೆ ಪ್ರಕರಣದಲ್ಲೂ ಈ ಕಾಯ್ದೆ ಸೇರ್ಪಡೆಯಾಗಿರುವುದರಿಂದ ತನಿಖೆ ಚುರುಕುಗೊಳ್ಳಲಿದೆ. ಜೊತೆಗೆ, ಕುತೂಹಲವೂ ಹೆಚ್ಚಿದೆ.

https://www.suddikanaja.com/2022/02/21/bajrang-dal-activist-harshas-killed-by-a-persons-and-procession-started/