ಶಿವಮೊಗ್ಗದಲ್ಲಿ ಮುಂದುವರಿದ ಸ್ಮಾರ್ಟ್ ಸಿಟಿ ಆವಾಂತರ, ಟ್ರಕ್ ಸಿಲುಕಿ ಗಂಟೆಗಟ್ಟಲೇ ರಗಳೆ

ಸುದ್ದಿ ಕಣಜ.ಕಾಂ | CITY | CITIZEN VOICE 
ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಸಾಕಷ್ಟು ಜನರಿಗೆ ತೊಂದರೆ ಆಗುತ್ತಲೇ ಇದೆ. ಅದಕ್ಕೆ ಮಂಗಳವಾರ ಇನ್ನೊಂದು ಸೇರ್ಪಡೆಯಾಗಿದೆ.
ನಗರದ ಗಾಂಧಿ ನಗರ ಮುಖ್ಯ ರಸ್ತೆಯಲ್ಲಿ ಟ್ರಕ್ ವೊಂದು ಸಿಲುಕಿಕೊಂಡು ಗಂಟೆಗಟ್ಟಲೇ ಸಮಸ್ಯೆಯಾಯಿತು. ಈ ಮಾರ್ಗದಲ್ಲಿ ಬೇರೆಯ ವಾಹನಗಳು ಓಡಾಟಕ್ಕೆ ತೊಂದರೆಯಾಯಿತು.

ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ತಗ್ಗಿನಲ್ಲಿ ಸಿಲುಕಿರುವ ಟ್ರಕ್

ಆಗಿದ್ದೇನು?
ಇತ್ತೀಚೆಗಷ್ಟೇ ಯುಜಿಡಿ ಚರಂಡಿ ಕಾಮಗಾರಿಯನ್ನು ಮಾಡಲಾಗಿದೆ. ಆದರೆ, ಕಾಮಗಾರಿ ಮಾಡಿರುವ ಜಾಗದಲ್ಲಿ ಸರಿಯಾಗಿ ಮಣ್ಣು ತುಂಬಿಲ್ಲ. ಹಾಗಾಗಿ, ಟ್ರಕ್ ಭಾರಕ್ಕೆ ಒಂದು ಕಡೆಯ ಗಾಲಿಗಳು ತಗ್ಗಿನಲ್ಲಿ ಸಿಲುಕಿಕೊಂಡಿವೆ. ಚಕ್ರಗಳನ್ನು ಹೊರಗಡೆ ತೆಗೆಯುವುದಕ್ಕೆ ಚಾಲಕರು ಸೇರಿದಂತೆ ಇತರರು ಹರಸಾಹಸ ಪಟ್ಟರು.
ರಸ್ತೆಯ ಒಂದು ಭಾಗದಲ್ಲಿ ಬಾಕ್ಸ್ ಚರಂಡಿಗೋಸ್ಕರ ಅಗೆದು ಹಾಗೆಯೇ ಬಿಡಲಾಗಿದೆ. ಹೀಗಾಗಿ, ರಸ್ತೆ ಕಿರಿದಾಗಿದಾಗಿದ್ದು, ಅದರ ಮಧ್ಯೆ ನಡು ರಸ್ತೆಯಲ್ಲಿ ಟ್ರಕ್ ಸಿಲುಕಿಕೊಂಡಿದ್ದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

READ | ಹರ್ಷ ಕೊಲೆ ಪ್ರಕರಣ ತನಿಖೆ ಇನ್ನಷ್ಟು ಟೈಟ್, ಯುಎಪಿಎ ಕಾಯ್ದೆ ಎಂಟ್ರಿ, ಏನಿದು ಕಾಯ್ದೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಗಾಂಧಿನಗರ ನಿವಾಸಿಗಳ ಹಿಡಿಶಾಪ
ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮುಖ್ಯ ರಸ್ತೆ ಸೇರಿದಂತೆ ಗಾಂಧಿನಗರ ಬಡಾವಣೆಯೊಳಗಿನ ರಸ್ತೆಗಳ ಅಗೆತ ನಿರಂತರವಾಗಿ ನಡೆಯುತ್ತಲೇ ಇದೆ. ಜನವಸತಿ ಪ್ರದೇಶದಲ್ಲಿ ಜನರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಮುಖ್ಯರಸ್ತೆಯನ್ನೇ ಮೂರ್ನಾಲ್ಕು ಸಲ ಅಗೆದು ಮುಚ್ಚಲಾಗಿದೆ. ಹೀಗಾಗಿ, ಧೂಳಿನ ಕಾಟವೂ ಹೆಚ್ಚಿದೆ. ಹೀಗಾಗಿ, ಆದ್ಯತೆಯ ಮೇರೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಧೂಳು ಹಾರುವುದನ್ನು ತಡೆಯುವುದಕ್ಕಾಗಿ ರಸ್ತೆಗೆ ನಿತ್ಯ ನೀರುಣಿಸಬೇಕು. ಆದರೆ, ಈ ಕೆಲಸ ನಿರಂತರವಾಗಿ ಮಾಡಲಾಗುತ್ತಿಲ್ಲ. ಸ್ಥಳೀಯ ಕಾರ್ಪೋರೇಟರ್, ಸ್ಮಾರ್ಟ್ ಸಿಟಿ ಎಂಡಿ, ಪಾಲಿಕೆ ಆಯುಕ್ತರು ಹಾಗೂ ಗುತ್ತಿಗೆದಾರರ ಗಮನಕ್ಕೂ ಈ ಎಲ್ಲ ವಿಷಯಗಳನ್ನು ತರಲಾಗಿದೆ. ಆದರೆ, ಯಾವ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

https://www.suddikanaja.com/2021/07/28/truck-terminal-in-shivamogga/