ಸುದ್ದಿ ಕಣಜ.ಕಾಂ | DISTRICT | MARIKAMBA JATRE
ಶಿವಮೊಗ್ಗ: ಕೋಟೆ ಪ್ರದೇಶವೆಲ್ಲ ಮಳಿಗೆಗಳಿಂದ ಆವೃತ್ತವಾಗಿತ್ತು. ಬೆವರಿಳಿಸುವ ಬಿಸಿಲನ್ನೂ ಲೆಕ್ಕಿಸದೇ ಸಾರ್ವಜನಿಕರು ಜಾತ್ರೆಯಲ್ಲಿ ಭಾಗವಹಿಸಿದರು.
ದಾರಿಯ ಇಕ್ಕೆಲಗಳಲ್ಲಿ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಟ್ಯಾಟೂ, ತಿಂಡಿ ತಿನಿಸು, ನಾವೆಲ್ಟಿ ಹೀಗೆ ವಿವಿಧ ಸಾಮಗ್ರಿಗಳನ್ನು ಒಳಗೊಂಡ ಮಳಿಗೆಗಳಿವೆ. ಮನೆಗೆ ಅಗತ್ಯವಿರುವ ವಸ್ತುಗಳ ಮಾರಾಟವೂ ಭರಪೂರವಾಗಿತ್ತು.
ಮಾರಿಕಾಂಬ ಜಾತ್ರೆಯ ಆಕರ್ಷಣೆಯ ವಿಷಯಗಳಿಗಾಗಿ ವಿಡಿಯೋ ವೀಕ್ಷಿಸಿ (VIDEO REPRT)
ಪೀಪಿ ಸದ್ದು, ಭಜ್ಜಿ ಗಮ್ಮತ್ತು
ಜಾತ್ರೆಯ ಯಾವ ಕಡೆಗೆ ಹೋದರೂ ಪೀಪಿ ಸದ್ದು ಜೋರಾಗಿತ್ತು. ಮಕ್ಕಳಿಗೆ ಇಷ್ಟದ ಆಟಿಕೆಗಳ ರಾಶಿಯೇ ಮಳಿಗೆಗಳಲ್ಲಿ ಇತ್ತು. ಮಕ್ಕಳು ಅವುಗಳನ್ನು ಖರೀದಿಸಿಕೊಡುವಂತೆ ಪೋಷಕರಲ್ಲಿ ರಚ್ಚೆ ಹಿಡಿದ ದೃಶ್ಯಗಳು ಸಾಮಾನ್ಯವಾಗಿದ್ದವು. ದುಂಬಾಲು ಬಿದ್ದಾದರೂ ತಮಗಿಷ್ಟದ ಆಟಿಕೆ ಖರೀದಿಸಬೇಕೆಂಬ ಹಠ ಮಕ್ಕಳು ಹಿಡಿದಿದ್ದರು. ಇದರೊಂದಿಗೆ ಖಾದ್ಯ ಪ್ರಿಯರಿಗೆ ಬಿಸಿ ಬಿಸಿ ಭಜ್ಜಿ ಬೋಂಡ ಕೂಡ ಬಾಯಿಗೆ ನೀರು ಬರಿಸುತಿತ್ತು.
READ | ಮಾರಿಕಾಂಬ ಜಾತ್ರೆಯಲ್ಲಿ ರಾರಾಜಿಸಿದ ಕೇಸರಿ ಧ್ವಜ, ಹರ್ಷನ ಫ್ಲೆಕ್ಸ್
ಭಿನ್ನಾಭಿನ್ನ ವಿನ್ಯಾಸದ ಕಿವಿಯೋಲೆ
ಹೆಣ್ಣು ಮಕ್ಕಳಂತೂ ಭಿನ್ನಾಭಿನ್ನ ವಿನ್ಯಾಸದ ಕಿವಿಯೋಲೆಗಳನ್ನು ಖರೀದಿಸುವುದರಲ್ಲಿ ತಲ್ಲೀನರಾಗಿದ್ದರು. ಜಾತ್ರೆಯುದ್ದಕ್ಕೂ ಮಹಿಳೆಯರ ಅಲಂಕಾರಿಕ ವಸ್ತುಗಳ ಮಳಿಗೆಗಳದ್ದೇ ಪಾರುಪತ್ಯ ಜೋರಾಗಿತ್ತು. ಮಹಿಳೆಯರು ಚೌಕಾಶಿ ಮಾಡಿ ಖರೀದಿಸುತ್ತಿದ್ದರು. ಬಣ್ಣಬಣ್ಣದ ಸರಗಳು, ಮತ್ತಿನ ಹಾರಗಳು ಇದ್ದವು.
ಟ್ಯಾಟೂ ಹಾಕಿಸಿಕೊಳ್ಳಲು ಡಿಮ್ಯಾಂಡ್
ಟ್ಯಾಟೂ ಹಾಕಿಸಿಕೊಳ್ಳಲು ಯುವಕ, ಯುವತಿಯರು ಮುಗಿಬಿದ್ದಿದ್ದರು. ಕೈ, ಮುಂಗೈ, ಕೊರಳಿನ ಮೇಲೆ ವಿವಿಧ ವಿನ್ಯಾಸದ ಚಿತ್ರಗಳನ್ನು ಬಿಡಿಸಿಕೊಳ್ಳುತ್ತಿದ್ದರು. ಟ್ಯಾಟೂ ಬಿಡಿಸುವವರು ಹಲವೆಡೆಯಿಂದ ಶಿವಮೊಗ್ಗಕ್ಕೆ ಬಂದಿದ್ದು, ನೂರಾರು ನಮೂನೆಯ ಚಿತ್ರಗಳು ಇಲ್ಲಿ ಲಭ್ಯ ಇವೆ.