ಸುದ್ದಿ ಕಣಜ.ಕಾಂ | DISTRICT | SSLC EXAMS
ಶಿವಮೊಗ್ಗ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿವೆ. ಹಿಜಾಬ್ ವಿವಾದ (Hijab Controversy) ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಹಿಜಾಬ್ ತೆಗೆಯಲು ಹಿಂದೇಟು, ಮನವೊಲೈಕೆ
ಶಿವಮೊಗ್ಗ ನಗರದ ಕಸ್ತೂರ ಬಾ ಪ್ರೌಢ ಶಾಲೆ(Kasturba high school)ಯಲ್ಲಿ ಬೆಳಗ್ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ (SSLC Exam) ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ತೆಗೆಯಲು ಹಿಂದೇಟು ಹಾಕಿದ ಘಟನೆ ನಡೆದಿದೆ.
ಹಿಜಾಬ್ (Hijab) ಧರಿಸಲು ಅವಕಾಶ ನೀಡಿಲ್ಲ ಎಂಬ ಕಾರಣದಿಂದಾಗಿ ಪೋಷಕರೊಂದಿಗೆ ಪರೀಕ್ಷೆ ಕೇಂದ್ರದಿಂದ ಮನೆಗೆ ತೆರಳಲು ಮುಂದಾಗಿದ್ದ ವಿದ್ಯಾರ್ಥಿನಿಯನ್ನು ಶಾಲೆ ಸಿಬ್ಬಂದಿ ತಡೆದು ಮನವೊಲೈಸಿದ್ದಾರೆ. ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪೋಷಕರು ಮತ್ತು ವಿದ್ಯಾರ್ಥಿನಿಗೆ ತಿಳಿಹೇಳಿಸಿದ್ದಾರೆ. ಬಳಿಕ ಶಾಲೆಯೊಳಗಡೆ ಪ್ರವೇಶಿಸಿರುವ ವಿದ್ಯಾರ್ಥಿನಿಯು ಪರೀಕ್ಷೆ ಬರೆದಿದ್ದಾಳೆ.
94 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ
ಜಿಲ್ಲೆಯಲ್ಲಿ ಒಟ್ಟು 94 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಇದರಲ್ಲಿ 90 ರೆಗ್ಯುಲರ್ ಹಾಗೂ 4 ಖಾಸಗಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ 24,381 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿದೆ. ಗುಂಪುಗೂಡುವುದು ನಿರ್ಬಂಧಿಸಲಾಗಿದೆ.