ಪಶ್ಚಿಮಘಟ್ಟದ ಸೂಕ್ಷ್ಮ ವಿಚಾರಗಳಿಗೆ ದನಿಯಾದ ಶಿವಮೊಗ್ಗ ಸಾಹಿತ್ಯ ಸಮ್ಮೇಳನ, ಡಾ.ಕೆಳದಿ ಗುಂಡಾಜೋಯ್ಸ್ ಹೇಳಿದ್ದೇನು?

ಸುದ್ದಿ ಕಣಜ.ಕಾಂ | KARNATAKA | KANNADA SAHITYA SAMMELANA
ಶಿವಮೊಗ್ಗ: ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಬುಧವಾರ ಆರಂಭಗೊಂಡಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾಜೋಯ್ಸ್ ಅವರು ಪಶ್ಚಿಮಘಟ್ಟದ ಹಲವು ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

READ | ನುಡಿತೇರಿಗೆ ಚಾಲನೆ, ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ವಿಶೇಷತೆಗಳು ಇಲ್ಲಿವೆ

ಹಿರಿಯ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾಜೋಯ್ಸ್ ಹೇಳಿದ್ದಿಷ್ಟು…

 1. ಹೆಚ್ಚು ಒತ್ತುವರಿ ಜಿಲ್ಲೆ ಎಂಬ ಕುಖ್ಯಾತಿ
  ಶಿವಮೊಗ್ಗ ಜಿಲ್ಲೆ ದೇಶದಲ್ಲೇ ಹೆಚ್ಚು ಒತ್ತುವರಿಯಾದ ಜಿಲ್ಲೆ ಎಂಬ ಕುಖ್ಯಾತಿಗೆ ಒಳಗಾಗಿದೆ. ಅಭಿವೃದ್ಧಿಯನ್ನು ಜನರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ.
 2. ಮಾಲಾಗಳ ಹೆಸರಿನಲ್ಲಿ ಪ್ರಕೃತಿಗೆ ಕುತ್ತು
  ಭಾರತಮಾಲಾ ಎಂಬ ಹೆದ್ದಾರಿ ಅಗಲೀಕರಣ ಯೋಜನೆಯು ಲಕ್ಷಾಂತರ ಮರಗಳನ್ನು ಪಶ್ಚಿಮಘಟ್ಟಗಳಲ್ಲಿ ನಾಶ ಮಾಡಲಾಗುತ್ತಿದೆ. ಪರ್ವತ ಮಾಲಾ ಯೋಜನೆ ಕೊಡಚಾದ್ರಿ, ಮುಳ್ಳಯನಗಿರಿಯಂತಹ ಬೆಟ್ಟಗಳನ್ನು ನುಂಗುತ್ತಿವೆ. ಸಾಗರ ಮಾಲಾ ಹಾಗೂ ನೀಲಿ ಕ್ರಾಂತಿ ಯೋಜನೆಗಳು ಸಮುದ್ರದ ಜೀವ ವೈವಿಧ್ಯವನ್ನು ವಿನಾಶದಂಚಿಗೆ ತಂದಿಟ್ಟಿದೆ.
 3. ಪ್ರವಾಸೋದ್ಯಮಕ್ಕಾಗಿ ನಿಸರ್ಗ ಧಕ್ಕೆ
  ಪ್ರವಾಸಿಗರನ್ನು ಸೆಳೆಯುವ ಯೋಜನೆಯಿಂದ ವಿಶ್ವ ಪ್ರಸಿದ್ಧ ಜೋಗ ಜಲಪಾತದ ಅಸ್ತಿತ್ವಕ್ಕೆ ಕುತ್ತು ತರಲಿದೆ. ಕೇಂದ್ರ ಅಥವಾ ರಾಜ್ಯ ಬಜೆಟ್ಟಿನಲ್ಲಿ ಹಸಿರೀಕರಣಕ್ಕೆ 100 ಕೋಟಿ ಹಾಗೂ ಸಂರಕ್ಷಿತ ಪ್ರದೇಶಗಳ ರಕ್ಷಣೆಗೆ 5 ಕೋಟಿ ನಿಗದಿ ಮಾಡಿದ್ದರೆ ಶಿಕ್ಷಣ ಕ್ಷೇತ್ರಕ್ಕೆ 30 ಸಾವಿರ ಕೋಟಿ ನಿಗದಿ ಮಾಡಲಾಗಿದೆ.
 4. ಜೀವವೈವಿಧ್ಯ ಕಾಪಾಡದಿದ್ದರೆ ಕಾದಿದೆ ಆಪತ್ತು
  ಹವಾಗುಣ ಬದಲಾವಣೆಯ ತುರ್ತು ಪರಿಸ್ಥಿತಿಯನ್ನು ಎದುರಿಸಬಲ್ಲ ಏಕೈಕ ಮಾರ್ಗವೆಂದರೆ, ಇರುವ ಅರಣ್ಯ ಹಾಗೂ ಜೀವ ವೈವಿಧ್ಯ ಪ್ರದೇಶವನ್ನು ಉಳಿಸಿಕೊಳ್ಳುವುದರ ಜೊತೆಗೆ ಅರಣ್ಯ ಪ್ರದೇಶವನ್ನು ಹೆಚ್ಚು ಮಾಡುವುದು. ಇಲ್ಲವಾದಲ್ಲಿ, ಭೀಕರ ಬರ, ತನ್ಮೂಲಕ ಹರಡುವ ಸಾಂಕ್ರಾಮಿಕ ರೋಗಗಳು ಹೆಚ್ಚುವ ಸಾಧ್ಯತೆ ಇದೆ.
 5. ಭೂತಾನ್ ನೆಮ್ಮದಿಯ ಸೂಚ್ಯಾಂಕ ಜಗತ್ತಿಗೆ ಮಾದರಿ
  ಪಕ್ಕದ ಭೂತಾನಿನ ನೆಮ್ಮದಿಯ ಸೂಚ್ಯಂಕ ಇಡೀ ಜಗತ್ತಿಗೆ ಮಾದರಿಯಾಗಿದೆ. ಅಲ್ಲೀಗ ಶೇ.75 ಅರಣ್ಯ ಪ್ರದೇಶವಿದೆ. ಅಲ್ಲಿ ಯಾರೂ ಪ್ಲಾಸ್ಟಿಕ್ ಬಳಸುವಂತಿಲ್ಲ. ಇಂತಹ ಮಾದರಿಗಳನ್ನು ಉದ್ದೇಶ ಪೂರ್ವಕವಾಗಿ ಹಿನ್ನೆಲೆಗೆ ತಳ್ಳಲಾಗುತ್ತಿದೆ.
 6. ಒತ್ತುವರಿಯಿಂದಾಗಿ ಸಮಸ್ಯೆ
  3 ಮಿಲಿ ಕನಿಷ್ಠ ಹಾಗೂ 60 ಮಿಲಿ ಗರಿಷ್ಠ ಮಳೆ ಬೀಳುವ ಮರಳುಗಾಡಿನ ಇಸ್ರೇಲ್ ದೇಶ ಲಭ್ಯವಿರುವ ನೀರನ್ನೇ ಬಳಸಿಕೊಂಡು ಹಣ್ಣು, ತರಕಾರಿ, ಬೇಳೆ ಕಾಳುಗಳನ್ನು ರಫ್ತು ಮಾಡುತ್ತಿದ್ದರೆ 2500 ಮಿಲಿ-5000 ಮಿಲಿ ಮಳೆ ಬೀಳುವ ಪಶ್ಚಿಮಘಟ್ಟಗಳ ಅನೇಕ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇದಕ್ಕೆ ಕಾರಣ ಮತ್ತೆ ಕಾಡು ನಾಶ ಮತ್ತು ಅನಗತ್ಯ ಅಭಿವೃದ್ಧಿ ಯೋಜನೆಗಳು. ಒತ್ತುವರಿಯಿಂದಾಗಿ ನಗರ ಹಾಗೂ ಹಳ್ಳಿಗಳ ಕೆರೆಗಳು ಒತ್ತುವರಿ ಸಮಸ್ಯೆಗೆ ಸಿಲುಕಿವೆ.
 7. ಏಕಜಾತಿಯ ನೆಡುತೋಪು
  ಶಿವಮೊಗ್ಗ ಜಿಲ್ಲೆಯ ಮಧ್ಯ ಪಶ್ಚಿಮ ಘಟ್ಟದಲ್ಲಿ ಬರುವ ಸಾಗರ ಪಾರಂಪರಿಕವಾಗಿ ಹಲವು ರೀತಿಯಲ್ಲಿ ನೊಂದ ಪ್ರದೇಶವಾಗಿದೆ. ನಿತ್ಯ ಹರಿದ್ವರ್ಣ ಕಾಡು, ಸೊಪ್ಪಿನಬೆಟ್ಟ, ಕಾನು ತೆಗೆದು 80ರ ದಶಕದಲ್ಲಿ ಸುಮಾರು 10 ಸಾವಿರ ಹೆಕ್ಟರ್ ಪ್ರದೇಶವನ್ನು ಏಕಜಾತಿ ಅಕೇಶಿಯಾ ನೆಡುತೋಪನ್ನಾಗಿ ಪರಿವರ್ತಿಸಲಾಯಿತು. ಇಷ್ಟು ಬೃಹತ್ ಪ್ರದೇಶದಲ್ಲಿ ಜೀವ ವೈವಿಧ್ಯ ನಶಿಸಿದ್ದಲ್ಲದೆ ಕಾಡು ಪ್ರಾಣಿಗಳಿಗೆ ನೈಸರ್ಗಿಕವಾದ ಆಹಾರದ ಕೊರತೆಯುಂಟಾಗಿ ರೈತರ ಜಮೀನುಗಳಿಗೆ ನುಗ್ಗಿ ಸಂಘರ್ಷಕ್ಕೆ ಕಾರಣವಾಗಿದೆ.
 8. ಜಲ ಮೂಲ ಸೇರುತ್ತಿರುವ ರಾಸಾಯನಿಕ
  ಬಗರ್ ಹುಕ್ಕುಂ ಹೆಸರಿನ ಯೋಜನೆ ಬಹುತೇಕ ಉಳ್ಳವರ ಪಾಲಾಗಿದೆ. ಕೇರಳ ಪ್ರೇರಿತ ಶುಂಠಿ ಬೇಸಾಯದಲ್ಲಿ ಅತಿ ರಾಸಾಯನಿಕ ಬಳಕೆಯಿಂದಾಗಿ ಭೂಮಿ ತನ್ನ ಸತ್ವ ಕಳೆದುಕೊಂಡಿದೆ. ಶುಂಠಿಗೆ ಬೆಂಕಿ ರೋಗಕ್ಕೆ ಮಾನೋಕ್ರಟಪಸ್ ನಂತಹ ಹತ್ತಾರು ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು ಇದರಿಂದ ಹತ್ತಿರದ ಕೆರೆ, ಕುಂಟೆಗಳು ವಿಷಪೂರಿತವಾಗಿ ಅಲ್ಲಿಯ ಜೀವ ವೈವಿಧ್ಯ ನಶಿಸಿಹೋಗುತ್ತಿದೆ.
 9. ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ಸಾಧಿಸಿಲ್ಲ ಯಶಸ್ಸು
  ಸಾಗರ ತಾಲ್ಲೂಕಿನಲ್ಲಿ ಅಧಿಕೃತವಾಗಿಯೇ 2000 ಕ್ಕಿಂತ ಹೆಚ್ಚು ಕೆರೆಗಳಿವೆ. ಸಾಗರ ತಾಲ್ಲೂಕಿನ 35 ಗ್ರಾಮಪಂಚಾಯತಿಗಳಲ್ಲಿ ಕನಿಷ್ಠ ಐದೈದು ಕೆರೆಗಳು ಸಂಪೂರ್ಣ ಅಥವಾ ಪಾಶ್ರ್ವವಾಗಿ ಒತ್ತುವರಿಗೊಳಗಾಗಿರುವುದು ಕಂಡುಬರುತ್ತದೆ. ಒತ್ತುವರಿ ತೆರವುಗೊಳಿಸುವ ಪ್ರಯತ್ನದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ.
 10. ಇತಿಹಾಸ ಕಾಲದ ಮರಗಳು ನೆಲಸಮ
  ಸಾಗರ ನಗರದ ರಾಷ್ಟ್ರೀಯ ಹೆದ್ದಾರಿ 206ನ್ನು ಅಗಲೀಕರಣ ಮಾಡುವ ಯೋಜನೆಯಲ್ಲಿ ಇತಿಹಾಸ ಕಾಲದ ಮರಗಳು ನೆಲ ಸೇರುತ್ತಿವೆ. ಇದು ಪಟ್ಟಣದ ಸರಾಸರಿ ಉಷ್ಣಾಂಶ ಏರಿಕೆಗೆ ಕಾರಣವಾಗಿದೆಯಲ್ಲದೆ ವೃದ್ಧರಲ್ಲಿ ಹಾಗೂ ಚಿಕ್ಕ ಮಕ್ಕಳಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಹಲವು ಕಾಹಿಲೆಗಳು ಕಂಡು ಬರುತ್ತಿವೆ.
 11. ಸಿಂಗಳಿಕಗಳ ಆವಾಸ ತಾಣಕ್ಕೆ ಲಗ್ಗೆ
  ಶರಾವತಿ ಪ್ರದೇಶದಲ್ಲಿ ಸುಮಾರು 2000 ಎಕರೆ ಅರಣ್ಯ ನಾಶವಾಗಿದ್ದು ಸಿಂಗಳಿಕ ಮೊದಲಾದವು ನಾಶವಾಗಿದೆ. ಜೊತೆಗೆ ಗಿರಿಜನರ ಕಲ್ಯಾಣ ಯೋಜನೆಗಾಗಿ ಸರ್ಕಾರ ರೂಪಿಸಿದ ಅರಣ್ಯ ಹಕ್ಕು ಕಾಯ್ದೆ 2005 ಈ ಯೋಜನೆಯು ಶೇ.90 ದುರುಪಯೋಗಗೊಂಡಿದೆ.
 12. ಅರಸಾಳು ಉಪ್ಪಿನಕಾಯಿಯ ಮರ ನಿರ್ನಾಮ
  ಅರಸಾಳು ಉಪ್ಪಿನಕಾಯಿಯಂತಹ ಮಾವಿನ ಮರಗಳು ನಿರ್ನಾಮವಾಗಿವೆ.
 13. ಅರಣ್ಯ ಬೆಳೆಸುವವರಿಗೂ ಧನ ಸಹಾಯ ನೀಡಿ
  ಮನುಷ್ಯನಿಗೂ ಜಾಗ ಬೇಕು. ರೈತರಿಗೆ ಭೂಮಿ ಬೇಕು. ಪರಿಸರವೂ ಉಳಿಯಬೇಕು. ಈ ತರಹದ ಯೋಚನೆಯನ್ನು ಸರ್ಕಾರಗಳು ಮಾಡಬೇಕು. ಹಲವು ತಜ್ಞರು ಈ ಕುರಿತಾಗಿ ಅನೇಕ ಸಲಹೆಗಳನ್ನು ನೀಡಿದ್ದಾರೆ. ಮಲೆನಾಡಿನ ಭಾಗದಲ್ಲಿ ಅರಣ್ಯ ಬೆಳೆಸುವ ಮತ್ತು ಉಳಿಸುವ ರೈತರಿಗೆ ಆರ್ಥಿಕ ಸಹಾಯ ನೀಡಬೇಕಾದ ತುರ್ತು ಇದೆ. ಮತ್ತೊಂದು ಸಲಹೆಯೆಂದರೆ ನೈಸರ್ಗಿಕ ಸೇವೆಗಳಿಗೆ ಬೆಲೆ ಕಟ್ಟುವ ಪರಿಪಾಠ ಪ್ರಾರಂಭವಾಗಬೇಕು. (ಉದಾಹರಣೆಗೆ ಜೇನು ರಕ್ಷಿಸುವವರಿಗೆ ವಿಶೇಷ ಅನುದಾನ ಸಿಗಬೇಕು. ಸಾವಯವ ಕೃಷಿ ಉತ್ತನ್ನಗಳಿಗೆ ಉನ್ನತ ಬೆಲೆ ನೀಡುವ ಅಗತ್ಯವಿದೆ.)

READ | ಶರಾವತಿ ಮುಳುಗಡೆ ಸಂತ್ರಸ್ತರಿಂದ 15 ದಿನಗಳ ಡೆಡ್ ಲೈನ್, ಬೇಡಿಕೆ ಈಡೇರದಿದ್ದರೆ ಶರಾವತಿ ಮಹಾ ವಿದ್ಯುದಾಗರ ಸಂಪರ್ಕ ಕಡಿತದ ಎಚ್ಚರಿಕೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್, ಸಾಂಸ್ಕೃತಿಕ ಚಿಂತಕ, ಸಾಹಿತಿ, ದೂರದರ್ಶನ ಕಲಾವಿದ ಪ್ರೊ. ಕೃಷ್ಣೇಗೌಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.