ಸುದ್ದಿ ಕಣಜ.ಕಾಂ | DISTRICT | ENTERTAINMENT NEWS
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಾದ್ಯಂತ ನಟ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ‘ಜೇಮ್ಸ್’ ಚಿತ್ರ ಬಿಡುಗಡೆಯೂ ಗುರುವಾರವೇ ಆಗಿರುವುದರಿಂದ ಚಿತ್ರ ಮಂದಿರಗಳ ಮುಂದೆ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.
VIDEO REPORT | ಶಿವಮೊಗ್ಗದಲ್ಲಿ ಹೇಗೆ ನಡೀತು ಪುನೀತ್ ಜನ್ಮದಿನಾಚರಣೆ, ಹೇಗಿತ್ತು `ಜೇಮ್ಸ್’ ಮೋಡಿ
READ | ಜನ್ಮದಿನ ಹಿನ್ನೆಲೆ ಎಲ್ಲೆಡೆ ಪುನೀತ್ ರಾಜಕುಮಾರ್ ಫ್ಲೆಕ್ಸ್, ‘ಸಿನಿ ಜರ್ನಿ’ ನೆನಪು
ನಗರದ ಎಚ್.ಪಿ.ಸಿ, ಲಕ್ಷ್ಮೀ ಚಿತ್ರಮಂದಿರ, ಭಾರತ್ ಸಿನಿಮಾಸ್ ನಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು, ಎಚ್.ಪಿ.ಸಿ ಚಿತ್ರಮಂದಿರದಲ್ಲಿ ಮೊದಲ ಫ್ಯಾನ್ಸ್ ಶೋ ಆಯೋಜಿಸಲಾಗಿತ್ತು. ಒಟ್ಟು 650 ಆಸನಗಳು ಭರ್ತಿಯಾಗಿದ್ದರೂ ಅಭಿಮಾನಿಗಳು ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ಚಿತ್ರ ವೀಕ್ಷಿಸಿದರು.
ಮೊದಲನೇ ದಿನ ಎಚ್.ಪಿ.ಸಿನಲ್ಲಿ ಐದು ಶೋಗಳನ್ನು ತೋರಿಸಲಾಗುತ್ತಿದ್ದು, ಅದರಲ್ಲಿ ಶೇ.80ರಷ್ಟು ಸೀಟುಗಳು ಬುಕಿಂಗ್ ಆಗಿವೆ. ಮಲ್ಟಿಪ್ಲೆಕ್ಸ್ ಸೇರಿದಂತೆ ವಿವಿಧೆಡೆ ಕೂಡ ಉತ್ತಮ ರೆಸ್ಪಾನ್ಸ್ ಇದೆ. ಅಭಿಮಾನಿಗಳು ಮುಂಗಡವಾಗಿಯೇ ಆನ್ ಲೈನ್ ಮೂಲಕ ಟಿಕೆಟ್ ಗಳನ್ನು ಕಾಯ್ದಿರಿಸಿದ್ದಾರೆ. ಇನ್ನೆರಡು ದಿನಗಳ ಟಿಕೆಟ್ ಗಳನ್ನು ಬುಕಿಂಗ್ ಮಾಡಲಾಗಿದೆ.
ಕೇಕ್ ಕತ್ತರಿಸಿ, ಕರ್ಪೂರ ಹಚ್ಚಿ ಜನ್ಮದಿನಾಚರಣೆ
ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ಬರೆದಿದ್ದ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಿದರು. ನಂತರ ಪುನೀತ್ ಕಟೌಟ್ ಮುಂದೆ ಕರ್ಪೂರ ಬೆಳಗಲಾಯಿತು. `ರಾಜಕುಮಾರ’ನ ಫ್ಲೆಕ್ಸ್ ಗೆ ಹಾಲಿನ ಅಭಿಷೇಕ ಮಾಡಲಾಯಿತು. ಬೃಹತ್ ಆಕಾರದ ಕಟೌಟ್ ನಿರ್ಮಿಸಿದ್ದು ಅದಕ್ಕೆ ಹಾರಗಳನ್ನು ಹಾಕಲಾಯಿತು.
ಬಿಗಿ ಪೊಲೀಸ್ ಭದ್ರತೆ
ಎಚ್.ಪಿ.ಸಿ, ಲಕ್ಷ್ಮೀ ಚಿತ್ರಮಂದಿರ ಮತ್ತು ಭಾರತ್ ಸಿನಿಮಾಸ್ ನಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಎಚ್.ಪಿ.ಸಿಯಲ್ಲಂತೂ ಬೆಳಗ್ಗೆಯಿಂದಲೇ ಕೆ.ಎಸ್.ಆರ್.ಪಿ. ವ್ಯಾನ್ ನಿಯೋಜಿಸಲಾಗಿತ್ತು. ಪೊಲೀಸರು ಯುವಕರನ್ನು ನಿಯಂತ್ರಿಸಲು ಪರದಾಡಿದರು.
ಪಲಾವ್ ವಿತರಣೆ, ರಂಗೋಲಿಯಲ್ಲಿ ಅರಳಿದ ರಾಜಕುಮಾರ
ಗಾಂಧಿ ಬಜಾರ್ ಸಗಟು ವರ್ತಕರ ಸಂಘದಿಂದ ಕೇಕ್ ಕತ್ತರಿಸಲಾಯಿತು. ನಂತರ ಸಆರ್ವಜನಿಕರಿಗೆ ಚಿತ್ರಾನ್ನ ವಿತರಣೆ ಮಾಡಲಾಯಿತು. ಅದೇ ರೀತಿ ವಿವಿಧೆಡೆ ಚಿತ್ರಾನ್ನ ವಿತರಿಸಲಾಯಿತು.
ಶಿವಮೊಗ್ಗ ಸಿಟಿ ಸೆಂಟರ್ ಮಾಲ್ ನಲ್ಲಿ ಹರೀಶ್ ಕುಮಾರ್ ಎಂಬುವವರು ಪಾರಿವಾಳದೊಂದಿಗೆ ಇರುವ ಪುನೀತ್ ಅವರ ರಂಗೋಲಿಯನ್ನು ಬಿಡಿಸಿದರು. ಇದರೊಂದಿಗೆ ಸಾಕಷ್ಟು ಜನ ಸೆಲ್ಫಿ ಕೂಡ ಕ್ಲಿಕ್ಕಸಿಕೊಂಡರು.
READ | ಪವರ್ ಸ್ಟಾರ್ ಮುದ್ದಿಸಿದ ಆನೆ ಮರಿಗೆ `ಪುನೀತ್’ ಹೆಸರು ನಾಮಕರಣ
ಅಭಿಮಾನಿಗಳಿಂದ ನೇತ್ರದಾನಕ್ಕೆ ನೋಂದಣಿ
ನಗರದಲ್ಲಿ ನೂರಕ್ಕೂ ಅಧಿಕ ಅಭಿಮಾನಿಗಳು ಪುನೀತ್ ಜನ್ಮದಿನದ ಪ್ರಯುಕ್ತ ನೇತ್ರದಾನಕ್ಕೆ ನೋಂದಣಿ ಮಾಡಿಸಿದರು.
ಹಳ್ಳಿ ಹಳ್ಳಿಗಳಲ್ಲಿ ‘ಅಪ್ಪು’ ಜನ್ಮ ಸಂಭ್ರಮಾಚರಣೆ
ಪುನೀತ್ ರಾಜಕುಮಾರ್ ಜನ್ಮದಿನ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನ ಗ್ರಾಮಾಂತರ ಭಾಗದ ಬನ್ನಿಕೆರೆ ಗ್ರಾಮದಲ್ಲಿ ನಂಬರ್ 17 ಎಂದು ಬರೆಯಿಸಿಕೊಂಡು ಒಂದೇ ರೀತಿಯ ಟೀ ಶರ್ಟ್ ಧರಿಸಿ ಬೆಳಗ್ಗೆಯಿಂದ ಪುನೀತ್ ಅವರ ಫ್ಲೆಕ್ಸ್ ಗೆ ಹೂವಿನ ಹಾರ ಹಾಕಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ.