ಸುದ್ದಿ ಕಣಜ.ಕಾಂ | KARNATAKA | GOVERNMENT ORDER
ಶಿವಮೊಗ್ಗ: ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಮೌಖಿಕ ಆದೇಶಗಳ ಮೇಲೆ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೌಖಿಕ ಆದೇಶಗಳಲ್ಲೇ ಸಾಕಷ್ಟು ಪರ್ಸೆಂಟೇಜ್ ನಂತಹ ಕೃತ್ಯಗಳು ನಡೆಯುತ್ತವೆ. ಅದನ್ನು ತಡೆಯುವುದಕ್ಕಾಗಿ ರಾಜ್ಯ ಸರ್ಕಾರ ಈ ಹೆಜ್ಜೆ ಇಟ್ಟಿದೆ ಎಂದರು.
READ | ಶಿವಮೊಗ್ಗದವರಿಗೆ ಸುವರ್ಣಾವಕಾಶ, ಏ.21ರಂದು ಅಪ್ರೆಂಟಿಸ್ ಮೇಳ, 45ಕ್ಕೂ ಅಧಿಕ ಕಂಪನಿಗಳು ಭಾಗಿ
ನಿಯಮ ಮೀರಿದರೆ ಕಾದಿದೆ ಕಂಟಕ
ಸರ್ಕಾರದ ಸೂಚನೆಯನ್ನು ಮೀರಿ ಮೌಖಿಕ ಆದೇಶದ ಮೇರೆಗೆ ಕಾಮಗಾರಿಗಳನ್ನು ಮಾಡಲು ಮುಂದಾದರೆ, ಸಂಬಂಧಪಟ್ಟ ಎಂಜಿನಿಯರ್, ಅಸಿಸ್ಟೆಂಟ್ ಎಂಜಿನಿಯರ್, ಎಇಇ, ಶಾಖಧಿಕಾರಿಗಳು ಜವಾಬ್ದಾರರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಮತ್ತು ಇಓಗಳು ಜವಾಬ್ದಾರರಾಗುತ್ತಾರೆ ಎಂದು ಸ್ಪಷ್ಟವಾದ ಲಿಖಿತ ಸೂಚನೆ ನೀಡಲಾಗುವುದು ಎಂದರು.
50 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ
50 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ಆರ್ಥಿಕ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಯ ತಾಂತ್ರಿಕ ತಜ್ಞರನ್ನು ಒಳಗೊಂಡಿರುವ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಉನ್ನತ ಮಟ್ಟದ ಸಮಿತಿಯನ್ನು ಕೆಟಿಟಿಪಿ ಕಾಯ್ದೆಯನ್ವಯ ರಚಿಸಲಾಗಿದೆ. ಸಮಿತಿಯು ಕಾಮಗಾರಿಯ ಅಂದಾಜು ಮೊತ್ತ, ಕೆಟಿಟಿಪಿ ಕಾಯ್ದೆಯನ್ವಯ ಟೆಂಡರ್ ನಿಯಮಗಳು ಇವುಗಳನ್ನು ಪರಿಶೀಲಿಸಿದ ನಂತರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಬೇಕು.
ಈ ಸಮಿತಿಯು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸರ್ಕಾರದ ಎಲ್ಲ ಇಲಾಖೆಗಳ 50 ಕೋಟಿ ರೂ. ಮೀರಿದ ಟೆಂಡರ್ ಗಳಿಗೂ ಈ ನಿಯಮ ಜಾರಿಯಾಗುತ್ತದೆ. ಟೆಂಡರ್ ಗಳು ಹೆಚ್ಚಾದ ಸಂದರ್ಭದಲ್ಲಿ ಶೀಘ್ರ ಟೆಂಡರ್ ಪರಿಶೀಲನೆಗೆ ಅನುಕೂಲವಾಗುವಂತೆ ಪರ್ಯಾಯ ಸಮಿತಿಯೊಂದನ್ನೂ ರಚಿಸಲಾಗುವುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಫಿಕ್ಸ್ ಆಯ್ತು ಹೆಸರು, ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ