ಭದ್ರಾ ನಾಲೆಗಳಿಗೆ ನೀರು ಬಂದ್ ಗೆ ಡೇಟ್ ಫಿಕ್ಸ್, ಜಲಾಶಯದಲ್ಲಿರುವ ನೀರಿನ ಪ್ರಮಾಣವೆಷ್ಟು?

 

 

ಸುದ್ದಿ ಕಣಜ. ಕಾಂ | DISTRICT | BHADRA DAM
ಶಿವಮೊಗ್ಗ: ಬೇಸಿಗೆ ಬೆಳೆಗಳಿಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರನ್ನು ಮೇ 15 ಕ್ಕೆ ನಿಲ್ಲಿಸಲಾಗುವುದು. ನೀರಿನ ಅವಶ್ಯಕತೆಗ ಅನುಸಾರವಾಗಿ ಮೇ 20ರ ವರೆಗೆ ಹೆಚ್ಚುವರಿಯಾಗಿ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿತು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಲವಗೊಪ್ಪದ ಕಚೇರಿಯಲ್ಲಿ ನಡೆದ 80 ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ರೈತರ ಹಿತವೇ ನಮ್ಮ ಮೂಲ ಉದ್ದೇಶ. ಕಾಡಾ ಅಧ್ಯಕ್ಷರು ಈ ಪ್ರಾಧಿಕಾರಕ್ಕೆ ಸೂಕ್ತವಾದ ವ್ಯಕ್ತಿಗಳಾಗಿದ್ದು, ಅತ್ಯುತ್ತಮವಾಗಿ ನೀರಿನ ನಿರ್ವಹಣೆ ಮಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಪೂರ್ಣವಾಗಿ ತುಂಗಾದಿಂದಲೇ ನೀರು ಹರಿಸುವ ಸಂಬಂಧ ಹಾಗೂ ನೀರಾವರಿಗೆ ಸಂಬಂಧಿಸಿದ ಇತರೆ ಸಮಸ್ಯೆಗಳ ಕುರಿತು ನೀರಾವರಿ ಸಚಿವರೊಂದಿಗೆ ಮಾತನಾಡುತ್ತೇನೆ. ಹಾಗೂ ಅನುದಾನ, ಮತ್ತಿತರೆ ಸಮಸ್ಯೆಗಳ ಪರಿಹಾರದ ಕುರಿತು ಪ್ರಯತ್ನ ಮಾಡುತ್ತೇನೆ ಹಾಗೂ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ಸಹ ತರುತ್ತೇನೆ. ನನ್ನ ಸಹಕಾರ ಸದಾ ಪ್ರಾಧಿಕಾರಕ್ಕೆ ಇದೆ.
ಡಿ.ಎಸ್.ಅರುಣ್, ವಿಧಾನ ಪರಿಷರ್ ಶಾಸಕರು

ಅಧ್ಯಕ್ಷತೆ ವಹಿಸಿದ್ದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ನೀರಾ ಸಲಹಾ ಸಮಿತಿ ಮತ್ತು ರೈತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಎಲ್ಲ ರೈತರ ಹಿತದೃಷಿಯಿಂದ ಭದ್ರಾ ಜಲಾಶಯದ ಬೇಸಿಗೆ ಬೆಳೆಗಳಿಗೆ ಹರಿಸುತ್ತಿದ್ದ ನೀರನ್ನು ಮೇ 15 ಕ್ಕೆ ನಿಲ್ಲಿಸಲಾಗುತ್ತಿದೆ. ನೀರಿನ ಅವಶ್ಯಕತೆಗನುಗುಣವಾಗಿ ಮೇ 20 ರವರೆಗೆ ನೀರನ್ನು ಹರಿಸಲು ಸಮಿತಿ ನಿರ್ಧಾರ ಕೈಗೊಂಡಿದೆ. ನಾನು ಪ್ರಾಧಿಕಾರದ ಅಧ್ಯಕ್ಷೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದೇನೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕೆಲಸ ಮಾಡಿಸಿದ್ದೇನೆ. ನಾವು ಕೇವಲ ಅಧಿಕಾರಿಗಳ ಮೇಲೆ ಅವಲಂಬಿತರಾಗದೇ ಕೆಲಸ ಮಾಡಬೇಕು. ಹಿಂದೆ ಬರ ಇಲ್ಲದಿದ್ದ ಸಮಯದಲ್ಲೂ ಸಹ ಕಡೆಯ ಭಾಗಕ್ಕೆ ನೀರು ಸಿಕ್ಕಿರಲಿಲ್ಲ. ಆದರೆ ಕಾಳಜಿ ಮತ್ತು ಜವಾಬ್ದಾರಿ ವಹಿಸಿದಲ್ಲಿ ಎಲ್ಲರಿಗೆ ನ್ಯಾಯ ಒದಗಿಸಬಹುದು. ಜೊತೆಗೆ ಅಧಿಕಾರಿಗಳು ಸರಿ ಹೋಗ್ತಾರೆ.

cada 1ಕಳೆದ ಬಾರಿ ಹಾಗೂ ಈ ಬಾರಿ ಎರಡೂ ಸಲ ಜಲಾಶಯದಲ್ಲಿ ನೀರು ಉಳಿಕೆ ಮಾಡಿದ್ದೇವೆ. ಅನಾವಶ್ಯಕವಾಗಿ ಹರಿಯುತ್ತಿದ್ದ ನೀರನ್ನು ವಾಣಿವಿಲಾಸ ಜಲಾಶಯಕ್ಕೆ ಹರಿಸಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯ ಡಿಪಿಆರ್ ನಲ್ಲಿ ಬದಲಾವಣೆ ಆಗಬೇಕು. ಶಾಸಕರು ಸಹ ಈ ಬಗ್ಗೆ ಇಚ್ಚಾಶಕ್ತಿ ತೋರಬೇಕೆಂದರು.
ಸಮಿತಿ ಸದಸ್ಯರು ಹಾಗೂ ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಕಡೆಯ ಭಾಗದ ರೈತರು ಸೇರಿದಂತೆ ಎಲ್ಲರ ಹಿತದೃಷ್ಟಿಯಿಂದ ನೀರನ್ನು ಮೇ 15 ಕ್ಕೆ ನಿಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ. 29.9 ಟಿಎಂಸಿ ನೀರು ಹರಿಸುವ ಭದ್ರಾ ಮೇಲ್ದಂತೆ ಯೋಜನೆಗೆ ತುಂಗಾದಿಂದ 17.4 ಟಿಂಎಂಸಿ ಮತ್ತು ಭದ್ರಾ ಜಲಾಶಯದಿಂದ 12.5 ಟಿಎಂಸಿ ನೀರು ಬಿಡಬೇಕೆಂದು ಡಿಪಿಆರ್ ಆಗಿದೆ. ಆದರೆ ಭದ್ರಾದ ಬದಲಾಗಿ ಸಂಪೂರ್ಣ 29.9 ಟಿಎಂಸಿ ನೀರು ತುಂಗಾದಿಂದಲೇ ಹರಿಸುವಂತೆ ಆಗಬೇಕೆಂದು ಮನವಿ ಮಾಡಿದರು.
ಸಮಿತಿ ಸದಸ್ಯರಾದ ಷಡಕ್ಷರಪ್ಪ ಗೌಡ್ರು ಮಾತನಾಡಿ, ಸಭೆಗೆ ಕೃಷಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿಯೊಂದಿಗೆ ಹಾಜರಾಗಬೇಕೆಂದು ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಬೇಕು ಹಾಗೂ ಶಾಸಕರೂ ಸಹ ಸಭೆಗೆ ಹಾಜರಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸದಸ್ಯ ಲಿಂಗರಾಜ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಎಂಬ ಹೆಸರಿನಿಂದ ಕರೆಯಲಾಗುತ್ತಿರುವ ಈ ಯೋಜನೆಯು ಏತ ನೀರಾವರಿ ಆಗಿರುವುದರಿಂದ ಸದರಿ ಯೋಜನೆಗೆ ಭದ್ರಾ ಏತ ನೀರಾವರಿ ಯೋಜನೆ ಎಂದು ನೇಮಕ ಮಾಡಬೇಕೆಂದು ಸಲಹೆ ನೀಡಿದರು.
ಸದಸ್ಯರಾದ ತೇಜಸ್ವಿ ಪಟೇಲ್, ವೈ.ಸಿ.ಮಲ್ಲಿಕಾರ್ಜುನ, ರುದ್ರಮೂರ್ತಿ, ಮಂಜುನಾಥ್ ರೆಡ್ಡಿ, ಮಹೇಶ್ ಇತರೆ ಸದಸ್ಯರು ಹಾಗೂ ರೈತ ಸಂಘಟನೆ ಪದಾಧಿಕಾರಿಗಳು, ರೈತ ಮುಖಂಡರು ಮಾತನಾಡಿದರು.
ಸಭೆಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು, ಆಡಳಿತಾಧಿಕಾರಿ ಅರುಣ್, ಕನೀನಿನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚಂದ್ರಹಾಸ್, ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಭದ್ರಾ ಜಲಾಶಯದ ನೀರಿನ ಪ್ರಮಾಣ
27.04.2022ರಂದು ಹಾಲಿ ಬಳಕೆಗೆ ಬರುವ ನೀರಿನ ಪ್ರಮಾಣ 25.894 ಟಿಎಂಸಿ. 2021-22 ನೇ ಸಾಲಿನ ಬೇಸಿಗೆ ಬೆಳೆಗಳಿಗೆ ಹೆಚ್ಚುವರಿ ದಿನಗಳಿಗೆ ಹರಿಸಲು ಬೇಕಾಗಬಹುದಾದ ಸರಾಸರಿ ನೀರಿನ ಪ್ರಮಾಣ 6.20 ಟಿಂಎಂಸಿ. ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ 17.24 ಟಿಂಎಂಸಿ. ಭದ್ರಾ ಜಲಾಶಯದಲ್ಲಿ ಉಳಿಯಬಹುದಾದ ನೀರಿನ ಪ್ರಮಾಣ 8.65 ಟಿಎಂಸಿ.

error: Content is protected !!