ಸುದ್ದಿ ಕಣಜ.ಕಾಂ | CITY | SHIVAMOGGA SMART CITY
ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್ ಸಿಟಿಯ ಎಲ್ಲ ಕಾಮಗಾರಿಗಳು ಮುಂದಿನ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಸ್ಮಾಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್ ವಟಾರೆ ತಿಳಿಸಿದರು.
ಮಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಮಗಾರಿಗಳ ಪ್ರಗತಿ ವಿವರಗಳನ್ನು ನೀಡಿದರು.
ಇದುವರೆಗೆ 758 ಕೋಟಿ ರೂ. ಬಿಡುಗಡೆ
ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಅವಧಿಯನ್ನು ಮುಂದಿನ ಜೂನ್ ವರೆಗೆ ವಿಸ್ತರಿಸಿದೆ. ಆದರೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳು ಬಹುತೇಕ ಈ ವರ್ಷದ ಅಂತ್ಯದ ಒಳಗಾಗಿ ಪೂರ್ಣಗೊಳ್ಳಲಿವೆ. ಒಂದೆರಡು ಕಾಮಗಾರಿಗಳು ಮಾತ್ರ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಸರ್ಕಾರ ಇದುವರೆಗೆ 758 ಕೋಟಿ ರೂ. ಬಿಡುಗಡೆ ಮಾಡಿದ್ದು, 541.88 ಕೋಟಿ ರೂ. ವೆಚ್ಚವಾಗಿದೆ. ಇದುವರೆಗೆ ಯಾವುದೇ ಅನುದಾನ ಲೋಪವಾಗದಂತೆ ಕಾರ್ಯ ನಿರ್ವಹಿಸಲಾಗಿದೆ ಎಂದು ಹೇಳಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿಗೆ 19ನೇ ಸ್ಥಾನ
ದೇಶದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ 19 ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು 997 ಕೋಟಿ ರೂ. ಅಂದಾಜಿನಲ್ಲಿ 60 ಕಾಮಗಾರಿ ಕೈಗೊಳ್ಳಲಾಗಿದೆ. 31 ಕಾಮಗಾರಿಗಳು ಪೂರ್ಣಗೊಂಡಿವೆ. 29 ಕಾಮಗಾರಿಗಳು ಪ್ರಗತಿಯ ವಿವಿಧ ಹಂತದಲ್ಲಿವೆ ಎಂದರು.
ಪೂರ್ಣಗೊಂಡಿರುವ ಕಾಮಗಾರಿಗಳು
ಶೇ.67ರಷ್ಟು ಭೌತಿಕ ಹಾಗೂ ಶೇ.54ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. 505 ಕೋಟಿ ರೂ. ಅಂದಾಜು ಮೊತ್ತದಲ್ಲಿ 110 ಕಿಮೀ ರಸ್ತೆ ಅಭಿವೃದ್ಧಿ, 20ಕೋಟಿ ರೂ. ವೆಚ್ಚದಲ್ಲಿ 113 ಕನ್ಸರ್ವೆನ್ಸಿಗಳ ಅಭಿವೃದ್ಧಿ, 144ಕೋಟಿ ರೂ. ವೆಚ್ಚದಲ್ಲಿ ಹಸಿರೀಕರಣ ಮತ್ತು ಪಾರ್ಕ್ ಗಳ ಅಭಿವೃದ್ಧಿ, 57 ಕೋಟಿ ರೂ. ವೆಚ್ಚದಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, 17 ಕೋಟಿ ರೂ. ವೆಚ್ಚದಲ್ಲಿ ನಗರದ ಮೂರು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, 89ಕೋಟಿ ರೂ. ವೆಚ್ಚದಲ್ಲಿ ವಾಹನ ಪಾರ್ಕಿಂಗ್, ಹಾಕರ್ಸ್ ಜೋನ್, ಖಾಸಗಿ ಬಸ್ ನಿಲ್ದಾಣ ನವೀಕರಣ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.