ಶಿವಮೊಗ್ಗದಲ್ಲಿ ಇಂದಿನಿಂದ ‘ಪುನೀತ್ ರಾಜಕುಮಾರ್ ಕಪ್’ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿ, ವಿವಿಧ ರಾಜ್ಯಗಳ ತಂಡಗಳು ಭಾಗಿ

ಸುದ್ದಿ ಕಣಜ.ಕಾಂ | DISTRICT | SPORTS NEWS
ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ಮೇ‌ 6ರಿಂದ 8ರ ವರೆಗೆ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಕೆ. ಹರ್ಷ ಭೋವಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ‘ಪುನೀತ್ ರಾಜಕುಮಾರ್ ಕಪ್’ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಗೋವಾ ರಾಜ್ಯದ ತಂಡಗಳು ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ತುಮಕೂರು, ಮಂಗಳೂರು, ಮಂಡ್ಯ, ಹಾಸನ ಸೇರಿದಂತೆ ಇತರೆ ಜಿಲ್ಲೆಯ ಪ್ರಸಿದ್ಧ ತಂಡಗಳು ಭಾಗವಹಿಸಲಿವೆ ಎಂದರು.

READ | ಶಿವಮೊಗ್ಗದಲ್ಲಿ ಯೋಗ ತರಬೇತುದಾರರ ನೇರ ಸಂದರ್ಶನ, ಎಷ್ಟು ಹುದ್ದೆಗಳ ನೇಮಕಾತಿ?

ಎಷ್ಟು ತಂಡಗಳು‌ ಭಾಗಿ?
ಕ್ರೀಡಾಂಗಣದ ಎರಡು ಅಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, 27 ಪುರುಷರ ತಂಡಗಳು ಹಾಗೂ 6 ಮಹಿಳಾ ತಂಡಗಳು ಭಾಗವಹಿಸಲಿವೆ. 17 ಪುರುಷರ ತಂಡಗಳು ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸುತ್ತಿವೆ. ಪುರುಷರ ತಂಡಕ್ಕೆ ಪ್ರಥಮ ಬಹುಮಾನ ₹50 ಸಾವಿರ, ದ್ವಿತೀಯ ₹25 ಸಾವಿರ ಹಾಗೂ ಮಹಿಳೆಯರ ತಂಡಕ್ಕೆ ಪ್ರಥಮ ಬಹುಮಾನ ₹15 ಸಾವಿರ, ದ್ವಿತೀಯ ಬಹುಮಾನ ₹10 ಸಾವಿರ ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು ಎಂದರು.
ಹೇಗೆ ನಡೆಯಲಿವೆ ಪಂದ್ಯಾವಳಿ
‘ಟೈಗರ್ ಫೈಯರ್ಸ್’ ಹೆಸರಿನಲ್ಲಿ ಪಂದ್ಯಾವಳಿ ನಡೆಯುವವು. ಪ್ರತಿ ತಂಡದಿಂದ 8 ಆಟಗಾರರಿದ್ದು, ಇವರಲ್ಲಿ ಐವರು ಮಾತ್ರ ಆಟವಾಡುತ್ತಾರೆ. ಪ್ರತಿ ಪಂದ್ಯ 45 ನಿಮಿಷದ್ದಾಗಿದ್ದು, ಈ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿದ್ದು, ವಿಶೇಷವಾಗಿ ಪುನೀತ್ ರಾಜಕು ಮಾರ್ ಅವರ ಸ್ಮರಣಾರ್ಥ ಪ್ರತಿದಿನ ಸಂಜೆ ನೃತ್ಯ ರೂಪಕ ಮತ್ತು ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

READ | ಹಿಂದೂ ಹರ್ಷ ಹತ್ಯೆ ಪ್ರಕರಣ, ಆರೋಪಿಗಳು ಎನ್‍ಐಎ ವಶಕ್ಕೆ

ಒಟ್ಟು 400 ಕ್ಕೂ ಅಧಿಕ ಆಟಗಾರರು ಭಾಗವಹಿಸಲಿದ್ದು, ಇವರಿಗೆಲ್ಲ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಟೂರ್ನಿ ಆಯೋಜನೆಗೆ ಒಟ್ಟು ₹7 ಲಕ್ಷ ವೆಚ್ಚವಾಗಲಿದೆ. ಅಧಿಕೃತವಾಗಿ ಪಂದ್ಯಾವಳಿ ಉದ್ಘಾಟನೆ ಮೇ 7 ರಂದು ಸಂಜೆ 6 ಗಂಟೆಗೆ ನಡೆಯಲಿವೆ. ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನೆರವೇರಿಸಲಿದ್ದಾರೆ. ಮೇ 8 ರಂದು ನಡೆಯುವ ಸಮಾರೋಪ ಸಮಾರಂಭ ಜರುಗುವುದು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಶಶಿ, ಸುಸೈನಾದನ್, ಅರುಣ್ ಕುಮಾರ್ ಉಪಸ್ಥಿತರಿದ್ದರು.