2024ರ ವೇಳೆಗೆ ಸಿಗಲಿದೆ ಸಾರವರ್ಧಿತ ಅಕ್ಕಿ, ಏನಿದರ ವಿಶೇಷ, ಸಾರವರ್ಧಿತ ಅಕ್ಕಿ ಪತ್ತೆ ಹೇಗೆ?

 

ಸುದ್ದಿ ಕಣಜ.ಕಾಂ | KARNATAKA | FORTIFIED RICE
ಶಿವಮೊಗ್ಗ: ಪೋಷಕಾಂಶಗಳ ಕೊರತೆ, ರಕ್ತಹೀನತೆಯಂತಹ ಸಮಸ್ಯೆಗಳಿಂದ ಜನತೆಯನ್ನು ಪಾರು ಮಾಡಲು ಸರ್ಕಾರ 2024ರ ವೇಳೆಗೆ ದೇಶದಲ್ಲಿ ಸಾರವರ್ಧಿತ ಅಕ್ಕಿ  (Fortified Rice) ಒದಗಿಸುವ ಗುರಿಯನ್ನು ಹೊಂದಿದೆ ಎಂದು ದೆಹಲಿಯ ಪಾಥ್ (PATH) ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಸತ್ಯಬ್ರತ್ ಪಧಿ ತಿಳಿಸಿದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಹಾಗೂ ಕೇಂದ್ರ ಸರ್ಕಾರದಡಿಯ ಎನ್‍ಜಿಓ ಪಾಥ್ (Program for Appropriate Technology in Health) ಸಂಸ್ಥೆಯ ಪ್ರಾಯೋಜಕತ್ವದ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾರವರ್ಧಿತ ಅಕ್ಕಿ ಕುರಿತು ಸೆನ್ಸಿಟೈಸೇಷನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಾರವರ್ಧಿತ ಅಕ್ಕಿಯ ಮಹತ್ವ, ಅದರ ಗುಣಮಟ್ಟ, ಉತ್ಪಾದನೆ ಹಾಗೂ ವಿತರಣೆ ಬಗ್ಗೆ ನ್ಯಾಯಬೆಲೆ ಅಂಗಡಿ, ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡಿದರು.

READ | ಕಮೀಷನ್ ದಂಧೆಯ ಹಿಂದಿದೆ RSS, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ‌ ಆರೋಪ 

ಶೇ.65ರಷ್ಟು ಜನ ಆಹಾರಕ್ಕಾಗಿ ಅಕ್ಕಿ ಬಳಕೆ
ದೇಶದಲ್ಲಿ ಶೇ.65ರಷ್ಟು ಜನರು ಆಹಾರಕ್ಕಾಗಿ ಅಕ್ಕಿಯನ್ನು ಬಳಸುತ್ತಿದ್ದಾರೆ. ಅವರು ಬಳಸುವ ಅಕ್ಕಿಯನ್ನು ಪಾಲಿಶ್ ಮಾಡಿಸುವುದರಿಂದ ಅದರಲ್ಲಿ ಯಾವುದೇ ಸತ್ವ ಇರುವುದಿಲ್ಲ. ಹಾಗಾಗಿ ದೇಶದಲ್ಲಿ ಜನರು ಪೋಷಕಾಂಶಗಳ ಕೊರತೆಯಿಂದ ರಕ್ತ ಹೀನತೆ, ಇರುಳು ಕುರುಡು ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಶೇ.65 ರಷ್ಟು ಮಕ್ಕಳು, ಶೇ.49.4 ರಷ್ಟು ಮಹಿಳೆಯರು, ಶೇ.26.5 ಪುರುಷರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ.19.5 ರಷ್ಟು ಜನರು ವಯಸ್ಸಿಗೆ ತಕ್ಕಂತೆ ಎತ್ತರವಿಲ್ಲ. ಹಾಗೂ ಶೇ.32.9 ರಷ್ಟು ಜನರು ವಯಸ್ಸಿಗೆ ತಕ್ಕಂತೆ ತೂಕವಿಲ್ಲದಿರುವುದು ಕಾಣಬಹುದು ಎಂದು ಹೇಳಿದರು.
ಈ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ 2024ರ ವೇಳೆಗೆ ನ್ಯಾಯಬೆಲೆ ಅಂಗಡಿ, ಮಾಲ್‍ಗಳಲ್ಲಿ ಅಕ್ಕಿ ಸರಬರಾಜು ಕೇಂದ್ರಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಸಾರವರ್ಧಿತ ಅಕ್ಕಿಯನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಸಾರವರ್ಧಿತ ಅಕ್ಕಿ ಪತ್ತೆ ಹೇಗೆ?
ಅಕ್ಕಿಯ ಬ್ಯಾಗ್ ಗಳ ಮೇಲೆ ಪ್ಲಸ್ ಎಫ್ (+F) ಚಿನ್ಹೆಯನ್ನು ಬಳಸಲಾಗುತ್ತದೆ. ಇದು ಸಾರವರ್ಧಿತ ಅಕ್ಕಿಯಾಗಿದ್ದು, ಈ ಚಿಹ್ನೆಯಿಂದಾಗಿ ಸಾಮಾನ್ಯ ಅಕ್ಕಿ ಹಾಗೂ ಸಾರವರ್ಧಿತ ಅಕ್ಕಿಯನ್ನು ಗುರುತಿಸುವುದು ಬಹಳ ಸುಲಭ
ಕೇವಲ ಅಕ್ಕಿ ಮಾತ್ರವಲ್ಲದೆ ಹಾಲು, ಉಪ್ಪು, ಎಣ್ಣೆ, ಗೋಧಿ ಹಿಟ್ಟು, ಮುಂತಾದ ಆಹಾರ ಸಾಮಗ್ರಿಗಳಲ್ಲಿ ಕಬ್ಬಿಣಾಂಶಗಳು, ಫಾಲಿಕ್ ಆಸಿಡ್, ವಿಟಮಿನ್ ಬಿ-12, ವಿಟಮಿನ್ ಡಿ ಮುಂತಾದ ಪೋಷಕಾಂಶಗಳನ್ನು ಸೂಕ್ತ ಪ್ರಮಾಣದಲ್ಲಿ ಮಿಶ್ರಣ ಮಾಡಿ ಆಹಾರ, ನಾಗರಿಕ ಸರಬರಾಜು ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನದ ಬಿಸಿ ಊಟದಲ್ಲಿ ನೀಡಲಾಗುವುದು
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥನ್.ಬಿ.ಟಿ. ಮತ್ತು ಇತರೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶಿವಮೊಗ್ಗ ಜಿಲ್ಲೆಯ ನ್ಯಾಯಬೆಲೆ‌ ಅಂಗಡಿಯಲ್ಲಿ‌ ಸಿಗಲಿದೆ‌ ಸಾರವರ್ಧಿತ ಅಕ್ಕಿ‌, ಆರೋಗ್ಯಕ್ಕೆ‌ ಏನೆಲ್ಲ ಪ್ರಯೋಜನ, ಯಾರೆಲ್ಲ ಪಡೆಯಬಹುದು?

Leave a Reply

Your email address will not be published.