
ಸುದ್ದಿ ಕಣಜ.ಕಾಂ | KARNATAKA | CRIME NEWS
ಶಿವಮೊಗ್ಗ: ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡುತ್ತಿದ್ದ ವ್ಯಕ್ತಿಗೆ ಗೂಂಡಾ ಕಾಯ್ದೆ ಅಡಿ ಇನ್ನೊಂದು ವರ್ಷ ಬಂಧನ ಮುಂದುವರಿಸುವಂತೆ ಆದೇಶಿಸಲಾಗಿದೆ. ಇದರನ್ವಯ ಕಲ್ಬುರ್ಗಿ ಕೇಂದ್ರ ಕಾರಾಗೃಹಕ್ಕೆ ಈತನನ್ನು ಶಿಫ್ಟ್ ಮಾಡಲಾಗುವುದು.
ಸೂಳೆಬೈಲು ನಿವಾಸಿ ಸಲೀಂ ಅಲಿಯಾಸ್ ಚೋರ್ ಸಲೀಂ (36) ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗ ಮಾಡಲಾಗಿದೆ.
ಚಿಕ್ಕ ವಯಸ್ಸಿನಿಂದಲೇ ಸಮಾಜಘಾತುಕ ಕೃತ್ಯ
ಸಲೀಂ ತನ್ನ 13ನೇ ವಯಸ್ಸಿನಿಂದಲೇ ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 25 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
READ | ಜಗತ್ತು ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಶಿಶು, ಹೆತ್ತವರೂ ಸಾವು
2021ರ ಮೇ 20ರಂದು ಕೋಟೆ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ 6 ವಾಹನಗಳ ಗ್ಲಾಸ್ ಗಳನ್ನು ಒಡೆದು ಹಾಕಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿರುತ್ತಾನೆ. ಈತನು ತಲೆ ಮರೆಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದು, ಸಾಮಾನ್ಯ ಕಾನೂನು ಕ್ರಮಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಡೆಗಟ್ಟಲು ಸಾಧ್ಯವಾಗದೇ ಇರುವುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ ಮೇರೆಗೆ ಜಿಲ್ಲಾಧಿಕಾರಿ ಅವರು ವ್ಯಕ್ತಿಯ ವಿರುದ್ಧ ಬಂಧನ ಆಜ್ಞೆಯನ್ನು ಹೊರಡಿಸಿ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶಿಸಿದ್ದರು.
2022ರ ಜೂನ್ 1ರಂದು ರಾಜ್ಯ ಸರ್ಕಾರವು ಆದೇಶವನ್ನು ಸ್ಥಿರೀಕರಿಸಿರುತ್ತದೆ. ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಸಲೀಂನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ನೀಡಿದ ಮೇರೆಗೆ, ಬಂಧನದ ಆದೇಶವನ್ನು ಜೂ.25ರಿಂದ 1 ವರ್ಷದ ಅವಧಿಯವರೆಗೆ ಮುಂದುವರೆಸಿ ಆದೇಶಿಸಿರುತ್ತದೆ.