
ಸುದ್ದಿ ಕಣಜ.ಕಾಂ | KARNATAKA | HYBRID PARK
ಶಿವಮೊಗ್ಗ: ರಾಜ್ಯದ ಏಳು ಜಿಲ್ಲೆಗಳಲ್ಲಿ ಹೈಬ್ರಿಡ್ ಪಾರ್ಕ್ (hybrid park) ಆರಂಭಿಸಲಾಗುತ್ತಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಘೋಷಿಸಿದರು.
ನಗರಕ್ಕೆ ಆಗಮಿಸಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಜನಸ್ನೇಹಿ ವಿದ್ಯುತ್ ಉತ್ಪಾದನೆಗಾಗಿ ಹಸಿರು ವಿದ್ಯುತ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹೈಬ್ರಿಡ್ ಪಾರ್ಕ್ ನಿರ್ಮಾಣ ಯೋಜನೆಗೆ ತಯಾರಿ ನಡೆಸಲಾಗುತ್ತಿದ್ದು, 1 ಸಾವಿರ ಮೆಗಾ ವ್ಯಾಟ್ ಹಸಿರು ವಿದ್ಯುತ್ ಉತ್ಪಾದಿಸಲು ಸರ್ವೇ ಕಾರ್ಯ ಆರಂಭಿಸಲಾಗಿದೆ ಎಂದರು.
ರೈತರ ಪಂಪ್’ಸೆಟ್’ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡಲು 2 ಯೋಜನೆ ರೂಪಿಸಿದ್ದು, ಕುಸುಮ್ ಬಿ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 10 ಸಾವಿರ ವೈಯಕ್ತಿಕ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಫೀಡರ್ ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡುವ ಯೋಜನೆ ಕೂಡ ಪ್ರಗತಿಯಲ್ಲಿದ್ದು ರಾಜ್ಯದ ಜನತೆ ಈ ಎಲ್ಲ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
READ | ರೈತರಿಗೆ ಶುಭ ಸುದ್ದಿ ನೀಡಿದ ಇಂಧನ ಸಚಿವ, ಟ್ರಾನ್ಸ್’ಫರ್ ಸುಟ್ಟ 24 ಗಂಟೆಯಲ್ಲಿ ಬದಲಾವಣೆ
ಹೈಬ್ರಿಡ್ ಪಾರ್ಕ್ ಎಂದರೇನು, ಎಲ್ಲೆಲ್ಲಿ ಸ್ಥಾಪನೆ?
ಸೌರ ಮತ್ತು ಪವನ ಶಕ್ತಿ ಎರಡನ್ನೂ ಒಂದೆಡೆ ಉತ್ಪಾದನೆ ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ಯೋಜನೆಯೇ ‘ಹೈಬ್ರಿಡ್ ಪಾರ್ಕ್’. ಹೇರಳವಾಗಿ ಸೌರ ಮತ್ತು ಪವನ ಲಭ್ಯವಿರುವ ಕಡೆಗಳಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು
ಚಿತ್ರದುರ್ಗ, ತುಮಕೂರು, ಬಾಗಲಕೋಟೆ, ಗದಗ, ಕೊಪ್ಪಳ ಸೇರಿ ಏಳು ಜಿಲ್ಲೆಗಳಲ್ಲಿ ಹೈ.ಪಾರ್ಕ್ ಸ್ಥಾಪನೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ವಿದ್ಯುತ್ ಕೊರತೆ ಆಗದಂತೆ ಕ್ರಮ
ನಾವು ಶರಾವತಿಯಿಂದ ಶೇ.20 ವಿದ್ಯುತ್ ಪಡೆಯುತ್ತಿದ್ದು, ಜಿಲ್ಲೆಯಲ್ಲಿ ವಿದ್ಯುತ್ ಅಡಚಣೆಯಾಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕಾರಿಪುರ, ಸಾಗರ, ಸೊರಬ, ತೀರ್ಥಹಳ್ಳಿ ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಒಟ್ಟು 6 ಕಡೆಗಳಲ್ಲಿ 110 ಕೆವಿ ಸ್ಟೇಷನ್ ಮತ್ತು ಸಾಗರದ ನಾಡಮಂಚಾಲೆಯಲ್ಲಿ 70 ಕೋಟಿ ವೆಚ್ಚದಲ್ಲಿ 200 ಕೆವಿ ಸ್ಟೇಷನ್ ಸ್ಥಾಪನೆಗೆ ಟೆಂಡರ್ ಆಗಿದೆ. ಮುಂದಿನ ತಿಂಗಳು ಗುದ್ದಲಿ ಪೂಜೆ ಸಹ ನಡೆಯಲಿದ್ದು ರಾಜ್ಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಹೊಸ ಪ್ರಗತಿಯನ್ನು ಕಾಣುತ್ತಿದ್ದೇವೆ ಎಂದರು.